ಎಲ್ಲ ನೈಜೀರಿಯನ್ನರಿಗೂ ಅಪರಾಧಿ ಹಣೆಪಟ್ಟಿ ಅಂಟಿಸಬೇಕಿಲ್ಲ:ಸಂಸದ

Update: 2016-06-10 14:29 GMT

ಪಣಜಿ,ಜೂ.10: ನೈಜೀರಿಯಾ ಪ್ರಜೆಗಳನ್ನೊಳಗೊಂಡ ವಿಷಯಗಳನ್ನು ಪ್ರತ್ಯೇಕ ಪ್ರಕರಣಗಳ ಆಧಾರದಲ್ಲಿ ನಿರ್ವಹಿಸಬೇಕು ಮತ್ತು ಪ್ರತಿಯೊಬ್ಬರಿಗೂ ಅಪರಾಧಿ ಎಂಬ ಹಣೆಪಟ್ಟಿಯನ್ನು ಅಂಟಿಸಬಾರದು ಎಂದು ರಾಜ್ಯಸಭಾ ಸದಸ್ಯ ಶಾಂತಾರಾಮ ನಾಯ್ಕಿ ಅವರು ಶುಕ್ರವಾರ ಇಲ್ಲಿ ಹೇಳಿದರು. ದೇಶದಲ್ಲಿ ಅವಧಿ ಮೀರಿ ವಾಸವಾಗಿರುವ ವಿದೇಶಿಯರನ್ನು ಗಡೀಪಾರುಗೊಳಿಸಬೇಕು ಎಂದೂ ಅವರು ಅಭಿಪ್ರಾಯಿಸಿದರು.

ನೈಜೀರಿಯಾ ಪ್ರಜೆಗಳ ಪುಂಡಾಟಿಕೆಯ ಕುರಿತು ಕಾವೇರುತ್ತಿರುವ ವಿವಾದದ ನಡುವೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ನೈಜೀರಿಯನ್ನರೂ ಅಪರಾಧಿಗಳಲ್ಲ. ಅವರನ್ನೊಳಗೊಂಡ ವಿವಾದಗಳನ್ನು ಪ್ರತ್ಯೇಕ ಪ್ರಕರಣಗಳ ಆಧಾರದಲ್ಲಿ ನೋಡಬೇಕಾಗಿದೆ. ನೈಜೀರಿಯನ್ನರು ಸೇರಿದಂತೆ ವೀಸಾ ಅವಧಿ ಮುಗಿದ ನಂತರವೂ ಅಥವಾ ವೀಸಾ ಅವಧಿಯನ್ನು ವಿಸ್ತರಿಸಿಕೊಂಡು ವಾಸವಾಗಿರುವ ಎಲ್ಲ ವಿದೇಶಿಯರನ್ನು ಗಡೀಪಾರುಗೊಳಿಸುವುದೊಂದೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದರು. ಮಾದಕ ದ್ರವ್ಯ ಕಳ್ಳಸಾಗಣೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಅವರು ಹೇಳಿದರು.

 2013ರಲ್ಲಿ ಗೋವಾದ ಪರವರಿಯಲ್ಲಿ ನೈಜೀರಿಯನ್ನರ ಗುಂಪೊಂದು ಹಿಂಸಾಚಾರಕ್ಕಿಳಿದು ರಸ್ತೆ ತಡೆಯನ್ನುಂಟು ಮಾಡಿದ್ದ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಈ ಪ್ರಕರಣದಲ್ಲಿ ಈವರೆಗೂ ಆರೋಪ ಪಟ್ಟಿ ಸಲ್ಲಿಕೆಯಾಗದಿರುವುದು ತನಗೆ ಆಘಾತವನ್ನುಂಟು ಮಾಡಿದೆ ಎಂದರು.

ಒಟ್ಟಾರೆಯಾಗಿ ಭಾರತವು ಆಫ್ರಿಕನ್ ರಾಷ್ಟ್ರಗಳೊಂದಿಗೆ ಅತ್ಯುತ್ತಮ ಸಂಬಂಧಗಳನ್ನು ಹೊಂದಿದೆ ಮತ್ತು ಅದನ್ನು ಕಾಯ್ದುಕೊಳ್ಳಲು ಬಯಸುತ್ತದೆ ಎಂದು ನಾಯ್ಕಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News