ನೂತನ ಕೃತಿಯಲ್ಲಿ ದಾಭೋಲ್ಕರ್,ಪನ್ಸಾರೆ ಮತ್ತು ಕಲಬುರ್ಗಿ ಅವರ ಲೇಖನಗಳು

Update: 2016-06-10 18:17 GMT

ಹೊಸದಿಲ್ಲಿ,ಜೂ.10: ಅಭಿವ್ಯಕ್ತಿ ಸ್ವಾತಂತ್ರದ ದಮನ ಮತ್ತು ವಿಚಾರವಾದಿಗಳು ಹಾಗೂ ಚಿಂತಕರ ಅಮಾನವೀಯ ಹತ್ಯೆಗಳ ವಿರುದ್ಧ ಈ ಹಿಂದೆ ಧ್ವನಿಯೆತ್ತಿದ್ದ ಪ್ರತಿಷ್ಠಿತ ಲೇಖಕರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಇದೀಗ ತಾರತಮ್ಯದ ಎಲ್ಲ ರೂಪಗಳ ವಿರುದ್ಧ ಗಂಭೀರ ಚಿಂತನೆಯನ್ನು ಪ್ರತಿಪಾದಿಸುವ ಪುಸ್ತಕ ರಚನೆಗೆ ಒಂದಾಗಿದ್ದಾರೆ.

 ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಪ್ರಕಾಶನದ ‘ವರ್ಡ್ಸ್ ಮ್ಯಾಟರ್:ರೈಟಿಂಗ್ಸ್ ಅಗೇನ್‌ಸ್ಟ್ ಸೈಲೆನ್ಸ್ ’ಹೆಸರಿನ ನೂತನ ಕೃತಿಯ ಸಂಕಲನವನ್ನು ಪ್ರಶಸ್ತಿ ವಿಜೇತ ಕವಿ ಹಾಗೂ ವಿದ್ವಾಂಸ ಕೆ.ಸಚ್ಚಿದಾನಂದನ್ ಅವರು ನಿರ್ವಹಿಸಿದ್ದಾರೆ.
ರೋಮಿಲ್ಲಾ ಥಾಪರ್,ಗೀತಾ ಹರಿಹರನ್,ಪಂಕಜ್ ಮಿಶ್ರಾ,ಸಲೀಲ್ ತ್ರಿಪಾಠಿ ಮತ್ತು ಅನನ್ಯ ವಾಜಪೇಯಿ ಸೇರಿದಂತೆ ಹಲವಾರು ವಿದ್ವಾಂಸರು ಮತ್ತು ಲೇಖಕರ ಪ್ರಬಂಧಗಳನ್ನು ಕೃತಿಯು ಒಳಗೊಂಡಿದೆ.
 ಎಲ್ಲ ಬಗೆಯ ತಾರತಮ್ಯಗಳು ಮತ್ತು ಸಂಕುಚಿತ ಭಾವನೆಗಳ ವಿರುದ್ಧ ಹೋರಾಡಲು ಗಂಭೀರ ಚಿಂತನೆಯನ್ನು ಬೆಳೆಸಬೇಕಾದ ಅಗತ್ಯವನ್ನು ಈ ಲೇಖಕರು ತಮ್ಮ ಲೇಖನಿಗಳ ಮೂಲಕ ಪ್ರತಿಪಾದಿಸಿದ್ದಾರೆ ಎಂದು ಪ್ರಕಾಶನ ಸಂಸ್ಥೆಯು ಹೇಳಿದೆ.
ಮೂಲಭೂತವಾದಿಗಳಿಂದ ಹತ್ಯೆಗೀಡಾದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್,ಗೋವಿಂದ ಪನ್ಸಾರೆ ಮತ್ತು ಪ್ರೊ.ಎಂ.ಎಂ.ಕಲಬುರ್ಗಿ ಅವರ ಆಯ್ದ ಬರಹಗಳ ಜೊತೆಗೆ ಮಾರ್ಕಂಡೇಯ ಕಟ್ಜು,ಶ್ಯಾಮ್ ಸರನ್,ನಯನತಾರಾ ಸೆಹಗಲ್ ಮತ್ತು ಕೇಕಿ ದಾರುವಾಲಾರಂತಹ ಗಣ್ಯರ ಲೇಖನಗಳು ಮತ್ತು ಭಾಷಣಗಳನ್ನೂ ಈ ಕೃತಿಯು ಒಳಗೊಂಡಿದೆ.
 ಕಲಬುರ್ಗಿ,ದಾಭೋಲ್ಕರ್ ಮತ್ತು ಪನ್ಸಾರೆ ಅವರ ಹತ್ಯೆಗಳನ್ನು ವಿರೋಧಿಸಿ ಕಳೆದ ವರ್ಷ ದೇಶಾದ್ಯಂತ ಸಂಚಲನವನ್ನು ಮೂಡಿಸಿದ್ದ ‘ಪ್ರಶಸ್ತಿ ವಾಪ್ಸಿ’ ಅಭಿಯಾನದಲ್ಲಿ ಭಾಗಿಯಾಗಿದ್ದ ಕೆಲವರೂ ಕೃತಿಗೆ ಲೇಖನಗಳ ರೂಪದಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ದೇಶದ ಪ್ರಜಾಸತ್ತಾತ್ಮಕ ಸ್ವರೂಪದ ರಕ್ಷಣೆಯ ಜವಾಬ್ದಾರಿಯನ್ನು ಬುದ್ಧಿಜೀವಿಗಳು ವಹಿಸಿಕೊಳ್ಳಬೇಕಾದ ಅಗತ್ಯಕ್ಕೆ ಒತ್ತು ನೀಡಿರುವ ಕೃತಿಯು ಮುಕ್ತ ವಾಕ್‌ಸ್ವಾತಂತ್ರವನ್ನು ಪ್ರತಿಪಾದಿಸಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News