ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ

Update: 2016-06-10 18:19 GMT

ಹೊಸದಿಲ್ಲಿ,ಜೂ.10: ಕುಟುಕು ಕಾರ್ಯಾಚರಣೆಯೊಂದನ್ನು ಉಲ್ಲೇಖಿಸುವ ಮೂಲಕ ಶುಕ್ರವಾರ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸರಕಾರದ ವಿರುದ್ಧ ಹೊಸ ದಾಳಿಯನ್ನು ಆರಂಭಿಸಿರುವ ಬಿಜೆಪಿಯು, ಆಡಳಿತ ಪಕ್ಷವು ಮಥುರಾದ ಜವಾಹರಬಾಗ್ ಅತಿಕ್ರಮಣದಾರರ ಜೊತೆ ಶಾಮೀಲಾಗಿತ್ತು ಎನ್ನುವುದನ್ನು ಈ ಕುಟುಕು ಕಾರ್ಯಾಚರಣೆಯು ಬಯಲಿಗೆಳೆದಿದೆ ಎಂದು ಆರೋಪಿಸಿದೆ.

ಸತ್ಯವು ಹೊರಗೆ ಬರುವಂತಾಗಲು ತಕ್ಷಣವೇ ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಪಕ್ಷವು ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ ಶರ್ಮಾ ಅವರು, ಕುಟುಕು ಕಾರ್ಯಾಚರಣೆಯು ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಮತ್ತು ಅವರ ಸರಕಾರವನ್ನು ಬೆತ್ತಲೆಗೊಳಿಸಿದೆ. ಮಥುರಾ ಹಿಂಸಾಚಾರಕ್ಕಾಗಿ ಅಧಿಕಾರಿಗಳನ್ನು ಅವರು ದೂರಿದ್ದರು. ಆದರೆ 80ಕ್ಕೂ ಅಧಿಕ ಗುಪ್ತಚರ ಮಾಹಿತಿಗಳನ್ನು ಸರಕಾರಕ್ಕೆ ಕಳುಹಿಸಲಾಗಿತ್ತು, ಆದರೆ ಭೂ ಮಾಫಿಯಾದೊಂದಿಗೆ ಶಾಮೀಲಾಗಿದ್ದರಿಂದ ಅದು ಕ್ರಮವನ್ನು ಕೈಗೊಂಡಿರಲಿಲ್ಲ ಎನ್ನುವುದು ಈಗ ಬಹಿರಂಗಗೊಂಡಿದೆ ಎಂದರು.
ಪಂಥವೊಂದರ ಸದಸ್ಯರಾಗಿದ್ದ ಶಸ್ತ್ರಸಜ್ಜಿತ ಅತಿಕ್ರಮಣದಾರರ ಬಗ್ಗೆ ತಾವು ಉತ್ತರ ಪ್ರದೇಶ ಸರಕಾರಕ್ಕೆ ಮಾಹಿತಿಗಳನ್ನು ನೀಡಿದ್ದೆವು ಎಂದು ಗುಪ್ತಚರ ಅಧಿಕಾರಿಗಳು ಹೇಳುತ್ತಿರುವ ದೃಶ್ಯ ಕುಟುಕು ಕಾರ್ಯಾಚರಣೆಯ ವೀಡಿಯೊದಲ್ಲಿ ದಾಖಲಾಗಿದೆ.
ಪೊಲೀಸರ ಹತ್ಯೆಗಾಗಿ ಅಧಿಕಾರಿಗಳನ್ನು ದೂರಿದ್ದಕ್ಕಾಗಿ ಮುಖ್ಯಮಂತ್ರಿಗಳು ಅವರ ಕ್ಷಮೆಯನ್ನು ಯಾಚಿಸಬೇಕು ಮತ್ತು ಕುಟುಕು ಕಾರ್ಯಾಚರಣೆಯ ವೀಡಿಯೊದಲ್ಲಿ ತೋರಿಸಿರುವ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಶರ್ಮಾ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News