ಮಥುರಾ ಪಂಥದಿಂದ ಕೊಲೆಗೀಡಾದ ಎಸ್ಪಿಸೋದರನಿಂದ ಫೇಸ್‌ಬುಕ್ ಪೇಜ್ ಪ್ರಾರಂಭ

Update: 2016-06-12 09:28 GMT

ಆಗ್ರಾ, ಜೂ.11: ಮಥುರಾ ಗಲಭೆಯಲ್ಲಿ ಇತ್ತೀಚೆಗೆ ಬಲಿಯಾದ ಮಥುರಾ ಎಸ್ಪಿ ಮುಕುಲ್ ದ್ವಿವೇದಿಯವರ ಸಹೋದರ ಪ್ರಫುಲ್ ದ್ವಿವೇದಿ ಅವರು ಜಸ್ಟೀಸ್ ಫಾರ್ ಮುಕುಲ್ ಹೆಸರಿನಲ್ಲಿ ಫೇಸ್‌ಬುಕ್ ಪೇಜ್ ಆರಂಭಿಸಿದ್ದು, ತಮ್ಮ ಹೋರಾಟದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ಐಪಿಎಸ್ ಅಧಿಕಾರಿಯೊಬ್ಬರು ಹತ್ಯೆಯಾದರೂ, ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ಸಂತಾಪವನ್ನೂ ಸೂಚಿಸದಿರುವುದು ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ. ಮಥುರಾದ ಜವಾಹರ್‌ಪಾರ್ಕ್‌ನ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ವೇಳೆ ಮಥುರಾ ಎಸ್ಪಿ ಮುಕುಲ್ ದ್ವಿವೇದಿಯವರನ್ನು ಹತ್ಯೆ ಮಾಡಲಾಗಿತ್ತು.

ಎರಡು ದಿನ ಹಿಂದೆ ಈ ಪೇಜ್ ಆರಂಭಿಸಲಾಗಿದ್ದು, ಈಗಾಗಲೇ 4,800 ಲೈಕ್‌ಗಳನ್ನು ಪಡೆದಿದೆ. ಲಕ್ನೋದಲ್ಲಿ ಕುಳಿತಿದ್ದ ಉನ್ನತ ಅಧಿಕಾರಿಗಳು ಸಮರ್ಪಕವಾಗಿ ಪರಿಸ್ಥಿತಿಯನ್ನು ನಿಭಾಯಿಸದೇ ಇದ್ದುದೇ ಇವರ ವಂಚನೆ ಹತ್ಯೆಗೆ ಕಾರಣ ಎಂಬ ವಿವರ ಇದರಲ್ಲಿದ್ದು, ನೂರಾರು ಮಂದಿ ಇದನ್ನು ಷೇರ್ ಮಾಡಿದ್ದಾರೆ.

ಘಟನೆ ನಡೆದು ಎಂಟು ದಿನ ಕಳೆದರೂ ಯಾವ ತನಿಖೆಯೂ ನಡೆದಿಲ್ಲ. ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಗಮನ ಸೆಳೆಯುವ ಸಲುವಾಗಿ ಮತ್ತು ನಾಗರಿಕ ವಿಧಾನದಲ್ಲಿ ಕುಟುಂಬದ ಭಾವನೆಗಳನ್ನು ಹಂಚಿಕೊಳ್ಳಲು ಈ ಪೇಜ್ ಆರಂಭಿಸಿರುವುದಾಗಿ ಪ್ರಫುಲ್ ಹೇಳಿದ್ದಾರೆ.

ಉದ್ರಿಕ್ತ ಗುಂಪಿನ ನಡುವೆಯೇ ಎಸ್ಪಿಯನ್ನು ಬಿಟ್ಟು ಪಲಾಯನ ಮಾಡಿದ ಅವರ ಭದ್ರತಾ ಸಿಬ್ಬಂದಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News