ಮಧ್ಯಪ್ರದೇಶದ ಮೂರನೆ ಒಂದರಷ್ಟು ಬಾಲಕಾರ್ಮಿಕರು ಅನಕ್ಷರಸ್ಥರು

Update: 2016-06-11 15:28 GMT

ಭೋಪಾಲ್, ಜೂ.11: ಚೈಲ್ಡ್ ರೈಟ್ಸ್ ಅಂಡ್ ಯೂ (ಸಿಆರ್‌ವೈ) ಸ್ವಯಂಸೇವಾ ಸಂಘಟನೆ 2011ರ ಜನಗಣತಿ ಅಂಕಿ ಅಂಶಗಳನ್ನು ವಿಶ್ಲೇಷಿಸಿದ್ದು, ಮಧ್ಯಪ್ರದೇಶದಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಬಾಲಕಾರ್ಮಿಕರ ಪೈಕಿ ಮೂರನೆ ಒಂದರಷ್ಟು ಮಂದಿ ಅನಕ್ಷರಸ್ಥರು ಎಂಬ ಅಂಶವನ್ನು ಬಹಿರಂಗಪಡಿಸಿದೆ.

2011ರ ಜನಗಣತಿ ಪ್ರಕಾರ, 7,00,239 ಮಂದಿ ಬಾಲಕಾರ್ಮಿಕರು ಮಧ್ಯಪ್ರದೇಶದಲ್ಲಿದ್ದಾರೆ. ಈ ಮಕ್ಕಳ ಪೈಕಿ, ಶೇ.60ರಷ್ಟು ಮಕ್ಕಳು ದುರ್ಬಲ ವರ್ಗದ ಸೌಲಭ್ಯ ವಂಚಿತ ಕಾರ್ಮಿಕರಾಗಿದ್ದು, ಇವರು ವರ್ಷದಲ್ಲಿ ಆರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿ ಉದ್ಯೋಗ ಪಡೆಯುತ್ತಾರೆ. ಉಳಿದ 2,86,310 ಮಕ್ಕಳು ಪೂರ್ಣಾವಧಿ ಉದ್ಯೋಗದಲ್ಲಿದ್ದು, ವರ್ಷಕ್ಕೆ ಆರು ತಿಂಗಳಿಗಿಂತ ಅಧಿಕ ಅವಧಿಯ ಉದ್ಯೋಗ ಹೊಂದಿದ್ದಾರೆ ಎಂದು ಕ್ರೈ ಪ್ರಕಟಣೆಯಲ್ಲಿ ಹೇಳಿದೆ.

ಅಂಕಿ ಅಂಶಗಳ ವಿಸ್ತತ ವಿಶ್ಲೇಷಣೆಯಿಂದ ತಿಳಿದು ಬರುವ ಇನ್ನೊಂದು ಪ್ರಮುಖ ಅಂಶವೆಂದರೆ, ಒಂದು ಲಕ್ಷ ಮಂದಿ ಪೂರ್ಣಾವಧಿ ಕೆಲಸಗಾರರು, 7-14 ವರ್ಷ ವಯೋಮಿತಿಯವರಾಗಿದ್ದು, ಇವರಿಗೆ ಓದಲು ಅಥವಾ ಬರೆಯಲು ಬರುವುದಿಲ್ಲ. ಇನ್ನು 1.75 ಲಕ್ಷ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿಲ್ಲ ಎನ್ನುವುದನ್ನೂ ಸಂಸ್ಥೆ ಬಹಿರಂಗಪಡಿಸಿದೆ.

ದೇಶದ ಬಾಲಕಾರ್ಮಿಕರ ಪೈಕಿ ಶೇ.35ರಷ್ಟು ಮಂದಿ ಅನಕ್ಷರಸ್ಥರಾಗಿದ್ದು, ಅಂದರೆ ಪ್ರತಿ ಮೂವರು ಬಾಲಕಾರ್ಮಿಕರ ಪೈಕಿ ಒಬ್ಬರು ಅನಕ್ಷರಸ್ಥರಾಗಿದ್ದಾರೆ. ಸುಮಾರು 14 ಲಕ್ಷ ಬಾಲಕಾರ್ಮಿಕರು ಭಾರತದಲ್ಲಿ 7-14 ವರ್ಷ ವಯೋಮಿತಿಯವರಾಗಿದ್ದು, ಅವರಿಗೆ ತಮ್ಮ ಹೆಸರು ಬರೆಯಲೂ ಬರುವುದಿಲ್ಲ ಎಂಬ ಅಂಶ ವ್ಯಕ್ತವಾಗಿದೆ.

ಇದು ತೀರಾ ದುರದೃಷ್ಟಕರ ಪರಿಸ್ಥಿತಿಯಾಗಿದ್ದು, ಇದು ಬದಲಾಗದಿದ್ದರೆ, ಇವರು ಅಂತರ ಪೀಳಿಗೆಯ ಬಡತನ ಹಾಗೂ ನಿರುದ್ಯೋಗ ಚಕ್ರದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಕ್ರೈ ಉತ್ತರ ಭಾರತ ಪ್ರದೇಶಿಕ ನಿರ್ದೇಶಕ ಸೋಹಾ ಮೊಯಿತ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News