ಮುಸ್ಲಿಮರನ್ನು ಎದುರಿಸಲು ಹಿಂದೂಗಳಿಗೆ ಹೆಚ್ಚು ಮಕ್ಕಳಾಗಬೇಕು: ತೊಗಾಡಿಯಾ

Update: 2016-06-11 18:14 GMT

ಜಂಬೂಸರ್, ಜೂ.11: ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಜನಸಂಖ್ಯೆಯ ಪ್ರಮಾಣ ಕಡಿಮೆಗೊಳ್ಳಲು ಹಿಂದೂ ಪುರುಷರಲ್ಲಿ ಹೆಚ್ಚುತ್ತಿರುವ ‘ನಪುಂಸಕತೆ’ಯನ್ನು ದೂರಿರುವ ವಿಹಿಂಪ ನಾಯಕ ಪ್ರವೀಣ್ ತೊಗಾಡಿಯಾ ‘‘ನಿಮ್ಮ ಮನೆಗಳಿಗೆ ಹೋಗಿ ನಿಮ್ಮ ಪುರುಷತ್ವವನ್ನು ಆರಾಧಿಸಿ’’ ಎಂದು ಪುರುಷರಿಗೆ ಕರೆ ನೀಡಿದ್ದಾರೆ.

ಭರೂಚ್ ಜಿಲ್ಲೆಯ ಜಂಬೂಸರ್ ಪಟ್ಟಣದಲ್ಲಿ ಶುಕ್ರವಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ತೊಗಾಡಿಯಾ ‘‘ಮುಸ್ಲಿಮರನ್ನು ಎದುರಿಸಲು ಹಿಂದೂ ದಂಪತಿಗಳಿಗೆ ಹೆಚ್ಚು ಮಕ್ಕಳಾಗಬೇಕು’’ ಎಂದರು. ಲವ್ ಜಿಹಾದ್ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರ ಕೂಡ ಹಿಂದೂ ಜನಸಂಖ್ಯೆ ಕುಸಿಯಲು ಕಾರಣ ಎಂದು ಅವರು ಹೇಳಿದ್ದಾರೆ.
 ಸೇರಿದ ಜನಸಮೂಹದ ‘ಜೈ ಶ್ರೀ ರಾಮ್’ ಎಂಬ ಘೋಷಣೆಯ ನಡುವೆ ತೊಗಾಡಿಯಾ ‘‘ಇನ್ನು ಹಿಂದೂಗಳ ಜನಸಂಖ್ಯೆ ಹೆಚ್ಚಾಗುತ್ತದೆ. ಮತಾಂತರಕ್ಕೆ ಇಲ್ಲ ಹೇಳಿ, ಘರ್‌ವಾಪ್ಸಿಗೆ ಹೌದು ಹೇಳಿ, ಲವ್ ಜಿಹಾದ್‌ಗೆ ಇಲ್ಲ ಹೇಳಿ, ಸಮಾನ ನಾಗರಿಕ ಸಂಹಿತೆಗೆ ಹೌದು ಹೇಳಿ, ಬಾಂಗ್ಲಾದೇಶಿ ಮುಸ್ಲಿಮರಿಗೆ ಇಲ್ಲ ಹೇಳಿ, ಹಿಂದೂ ಕುಟುಂಬಗಳಲ್ಲಿ ಹೆಚ್ಚು ಮಕ್ಕಳಾಗಲಿ’’ ಎಂದು ಹೇಳಿದರು.
‘ನಪುಂಸಕತೆಗೆ’ ಒಂದು ಕಾರಣವಾಗಿರುವ ತಂಬಾಕನ್ನು ವರ್ಜಿಸಬೇಕೆಂದು ಯುವಕರಿಗೆ ಕರೆ ನೀಡಿದ ಸ್ವತಹ ವೈದ್ಯರಾಗಿರುವ ತೊಗಾಡಿಯಾ ತಾವು ‘ತಯಾರಿಸಿದ’ ಉತ್ಪನ್ನವೊಂದನ್ನು ತೋರಿಸಿ ‘‘ಇದರ ದರ ರೂ. 600 ಆಗಿದ್ದರೂ ಇದನ್ನು ನಿಮಗೆ ರೂ. 500ಕ್ಕೆ ನೀಡುತ್ತೇನೆ. ಇದನ್ನು ಕೊಂಡು ಹೋಗಿ ನಿಮ್ಮ ಪತ್ನಿಯ ಬಳಿ ಕೊಟ್ಟು ನಿಮ್ಮ ಊಟದೊಂದಿಗೆ ಅದನ್ನು ಬೆರೆಸಿ ಕೊಡಲು ಹೇಳಿ. ಇದು ನಿಮ್ಮ ಪುರುಷತ್ವಕ್ಕೆ ಹಾಗೂ ಹೆಚ್ಚು ಮಕ್ಕಳಾಗಲು ಸಹಕಾರಿ’’ ಎಂದರು.
ಗೋರಕ್ಷಣೆಯ ಬಗ್ಗೆ ಮಾತನಾಡುತ್ತಾ ‘‘ನಾವು (ಹಿಂದೂಗಳು) ನಮ್ಮ ಸಂಖ್ಯೆಯನ್ನು ಹೆಚ್ಚಿಸದೇ ಇದ್ದಲ್ಲಿ, ಜಂಬೂಸರ್ ನಗರದ ಯಾರಿಗಾದರೂ ಗೋ ಹತ್ಯೆ ಮಾಡುವ ಧೈರ್ಯವಿರುತ್ತಿತ್ತೇ?’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News