ಮೂವರು ಪ್ರವಾಸಿಗರನ್ನು ರಕ್ಷಿಸಿದ ಕಾಶ್ಮೀರಿ ಅಂಬಿಗ ಬಲಿ

Update: 2016-06-12 10:22 GMT

ಶ್ರೀನಗರ: ಇಲ್ಲಿನ ಝೀಲಂ ನದಿಯಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗಳನ್ನು ರಕ್ಷಿಸಿದ ಅಂಬಿಗ ಮತ್ತೆ ಅವರ ಬ್ಯಾಗ್ ತರಲು ನೀರಿಗೆ ಧುಮುಕಿದಾಗ ಜಲಸಮಾಧಿಯಾದ ಹೃದಯ ವಿದ್ರಾವಕ ಘಟನೆ ನಡೆದಿದೆ.
ತಮ್ಮನ್ನು ರಕ್ಷಿಸಿದ ಅಂಬಿಗನನ್ನು ತೇಲಿಹೋಗುತ್ತಿದ್ದ ಬ್ಯಾಗ್ ಹಿಡಿದು ತರುವಂತೆ ಒತ್ತಾಯಿಸಿ ಅಮಾನವೀಯವಾಗಿ ಮತ್ತೆ ನೀರಿಗೆ ಧುಮುಕುವಂತೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದುವರೆಗೂ 60 ವರ್ಷದ ಅಂಬಿಗ ಮಹ್ಮದ್ ಗುರೂ ಶವ ಪತ್ತೆಯಾಗಿಲ್ಲ. ಶವ ಪತ್ತೆಗಾಗಿ ನೌಕಾಪಡೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ನದಿಯಲ್ಲಿ ವಿಹಾರ ಹೋಗುತ್ತಿದ್ದಾಗ ನದಿ ಮಧ್ಯದಲ್ಲಿ ಬೋಟ್ ಎಂಜಿನ್ ಸ್ಥಗಿತವಾಯಿತು. ಸಮಯಪ್ರಜ್ಞೆ ಮೆರೆದ ಅಂಬಿಗ ಮೂವರು ಪ್ರವಾಸಿಗರನ್ನು ರಕ್ಷಿಸುವಲ್ಲಿ ಯಶಸ್ವಿಯಾದ. ಆದರೆ ತಮ್ಮ ಬ್ಯಾಗ್ ತರುವಂತೆ ನದಿ ಮಧ್ಯಕ್ಕೆ ಹೋಗುವಂತೆ ಪ್ರವಾಸಿಗಳು ಮತ್ತೆ ಒತ್ತಡ ಹೇರಿದರು. ನದಿಗೆ ಧುಮುಕಿದ ಅಂಬಿಗನಿಗೆ ಬ್ಯಾಗ್ ಸಿಕ್ಕಿತಾದರೂ, ಈಜಿಕೊಂಡು ಬರಲು ಸಾಧ್ಯವಾಗದೇ ನೀರಿನಲ್ಲಿ ಕೊಚ್ಚಿಕೊಂಡು ಹೋದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದಾಲ್ ಲೇಕ್ ಹಾಗೂ ಝೀಲಂ ನದಿಯಲ್ಲಿ ಸಣ್ಣ ನಾವೆಗಳಲ್ಲಿ ವಿಹಾರ ಕೈಗೊಳ್ಳುವುದನ್ನು ಶಿಕಾರಾಸ್ ಎಂದು ಕರೆಯಲಾಗುತ್ತದೆ. ಬೇಸಿಗೆಯಲ್ಲಿ ಇಲ್ಲಿ ವಿಹಾರಕ್ಕಾಗಿ ಸಾವಿರಾರು ಮಂದಿ ಪ್ರವಾಸಿಗಳು ಆಗಮಿಸುತ್ತಾರೆ. ಇಂಥ ಘಟನೆಗಳು ಅಪರೂಪ. ನಾವು ಅಂಬಿಗನ ವಯಸ್ಸನ್ನು ನೊಡಬೇಕು. ಮೂವರನ್ನು ರಕ್ಷಿಸುವಲ್ಲೇ ದಣಿದಿದ್ದ ಆತ ತನ್ನ ಜೀವವನ್ನೂ ಪಣಕ್ಕಿಟ್ಟು ಮತ್ತೆ ಬ್ಯಾಗ್ ತರುವ ಸಲುವಾಗಿ ತೆರಳಿದ್ದ ಎಂದು ಪೊಲೀಸರು ಹೇಳಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News