ರಾಜ್ಯಸಭಾ ಚುನಾವಣೆಗಳಲ್ಲಿ ‘ಕುತಂತ್ರ’ : ಹೂಡಾ ಆರೋಪ,ತನಿಖೆಗೆ ಆಗ್ರಹ

Update: 2016-06-12 14:13 GMT

ಚಂಡಿಗಡ,ಜೂ.12: ಹರ್ಯಾಣದಲ್ಲಿ ರಾಜ್ಯಸಭಾ ಚುನಾವಣೆಗಳ ಮತ ಎಣಿಕೆ ಯಲ್ಲಿ ‘ಕುತಂತ್ರ’ ನಡೆದಿದೆಯೆಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಭೂಪಿಂದರ್ ಹೂಡಾ ಅವರು ಚುನಾವಣಾ ಆಯೋಗವು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

 ಮತದಾನ ಮಾಡಲು ಬಳಸಲಾಗಿದ್ದ ಪೆನ್‌ಗಳ ವಿಧಿವಿಜ್ಞಾನ ಪರೀಕ್ಷೆ ಸೇರಿದಂತೆ ತನಿಖೆಗೆ ಅವರು ಒತ್ತಾಯಿಸಿದ್ದಾರೆ. ನಿನ್ನೆ ನಡೆದ ಮತ ಎಣಿಕೆ ಸಂದರ್ಭದಲ್ಲಿ 14 ಕಾಂಗ್ರೆಸ್ ಶಾಸಕರ ಮತಗಳನ್ನು ರದ್ದುಗೊಳಿಸಲಾಗಿದ್ದರಿಂದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿದ್ದ ಝೀ ಟಿವಿಯ ಅಧ್ಯಕ್ಷ ಸುಭಾಷಚಂದ್ರ ಅವರು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಮತ್ತು ಐಎನ್‌ಎಲ್‌ಡಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಆರ್.ಕೆ.ಆನಂದ ಪರಾಭವಗೊಂಡಿದ್ದರು.

ಅಸಿಂಧುಗೊಂಡ 14 ಮತಗಳು ಕಾಂಗ್ರೆಸ್ ಶಾಸಕರದ್ದು ಎಂದು ಹರ್ಯಾಣದ ಶಿಕ್ಷಣ ಸಚಿವ ರಾಮ ಬಿಲಾಸ್ ಶರ್ಮಾ ಮತ್ತು ಪ್ರತಿಪಕ್ಷ ನಾಯಕ ಅಭಯ ಚೌಟಾಲಾ ಅವರು ಹೇಳಿದ ಬಳಿಕ ಕಾಂಗ್ರೆಸ್ ಮತ್ತು ಐಎನ್‌ಎಲ್‌ಡಿ ಪರಸ್ಪರರತ್ತ ಬೆಟ್ಟು ತೋರಿಸಿದ್ದವು.

ಕಾಂಗ್ರೆಸ್ ಶಾಸಕರು ಮತದಾನಕ್ಕೆಂದೇ ಮೀಸಲಿರಿಸಿದ್ದ ಪೆನ್ನನ್ನು ಬಿಟ್ಟು ಬೇರೆ ಪೆನ್ ಬಳಸಿದ್ದರಿಂದ 14 ಮತಗಳು ಅಸಿಂಧುಗೊಂಡಿವೆ ಎಂದು ಆನಂದ್ ಸೋಲಿನ ಬಳಿಕ ಚೌತಾಲಾ ಆರೋಪಿಸಿದ್ದರು.

ಐಎನ್‌ಎಲ್‌ಡಿಯ ಓರ್ವರನ್ನು ಹೊರತು ಪಡಿಸಿ ಇತರೆಲ್ಲ 18 ಶಾಸಕರು ತನ್ನ ಪರವಾಗಿ ಮತದಾನ ಮಾಡಿದ್ದಾರೆ. ಆದರೆ ಹೂಡಾ ಮತ್ತು ಅವರ ಕಾಂಗ್ರೆಸ್ ಪಕ್ಷ ತನ್ನನ್ನು ವಂಚಿಸಿದೆ ಎಂದು ಆನಂದ ಕೂಡ ದೂರಿದ್ದರು.

 ನಮ್ಮ ಶಾಸಕರು ತಮ್ಮ ಪೆನ್ ಮತ್ತು ಮೊಬೈಲ್‌ಗಳನ್ನು ಹೊರಗೆಯೇ ಬಿಟ್ಟು ಮತದಾನಕ್ಕೆ ತೆರಳಿದ್ದರು. ಒಳಗೆ ಮತದಾನಕ್ಕೆಂದು ಮೀಸಲಿರಿಸಿದ್ದ ಪೆನ್ನನ್ನೇ ಅವರು ಬಳಸಿದ್ದರು. ಮತಪತ್ರವನ್ನು ಪೆಟ್ಟಿಗೆಯಲ್ಲಿ ಹಾಕುವ ಮುನ್ನ ಅವರು ನಮ್ಮ ಚುನಾವಣಾ ವೀಕ್ಷಕ ಬಿ.ಕೆ.ಹರಿಪ್ರಸಾದ್ ಅವರಿಗೆ ಮತಗಳನ್ನೂ ತೋರಿಸಿದ್ದರು ಎಂದು ಹೂಡಾ ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News