75 ಪ್ರಕರಣಗಳ ಮರು ವಿಚಾರಣೆ

Update: 2016-06-12 18:36 GMT

ಹೊಸದಿಲ್ಲಿ, ಜೂ.12: 1984ರ ಸಿಖ್ ವಿರೋಧಿ ಹತ್ಯಾಕಾಂಡಕ್ಕೆ ಸಂಬಂಧಿಸಿದ 75 ಪ್ರಕರಣಗಳ ವಿಚಾ ರಣೆಯನ್ನು ಮತ್ತೆ ನಡೆಸಲು ಕೇಂದ್ರ ಸರಕಾರದ ವಿಶೇಷ ತನಿಖಾತಂಡ ನಿರ್ಧರಿಸಿದೆ. ಇದು ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಪಂಜಾಬ್‌ನಲ್ಲಿ ರಾಜಕೀಯ ತಲ್ಲಣ ಸೃಷ್ಟಿಸುವ ಸಾಧ್ಯತೆ ಇದೆ. ಅಂದಿನ ಪ್ರಧಾನಿ ಇಂದಿರಾಗಾಂಧಿಯವರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ನಡೆದ ಗಲಭೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸಿಖ್ಖರು ಬಲಿಯಾಗಿದ್ದರು. 1984ರ ಅಕ್ಟೋಬರ್ 31ರಂದು ಸಿಖ್ ಅಂಗರಕ್ಷಕನ ಗುಂಡಿಗೆ ಇಂದಿರಾ ಬಲಿಯಾಗಿದ್ದರು.
ದಿಲ್ಲಿಯೊಂದರಲ್ಲೇ 2,733 ಮಂದಿ ಬಲಿಯಾಗಿದ್ದರು. ಈ ಪೈಕಿ ಬಹುತೇಕ ಮಂದಿ ಸಿಖ್ಖರು. 2017ರಲ್ಲಿ ಚುನಾವಣೆ ನಡೆಯುವ ಪಂಜಾಬ್‌ನಲ್ಲಿ ಪ್ರಬಲ ಸಮುದಾಯವಾದ ಸಿಖ್ಖ್ಖರನ್ನು ಓಲೈಸುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ದಿಲ್ಲಿಯಲ್ಲಿ 237 ಸಿಖ್ ವಿರೋಧಿ ಗಲಭೆ ಪ್ರಕರಣಗಳು ದಾಖಲಾಗಿದ್ದು, ಸಾಕ್ಷಗಳ ಕೊರತೆಯಿಂದ ಅಥವಾ ಸಂತ್ರಸ್ತರ ಲಭ್ಯತೆ ಇಲ್ಲದ ಕಾರಣ ಇವುಗಳನ್ನು ಮುಚ್ಚಿ ಹಾಕಲಾಗಿತ್ತು. ಇವುಗಳ ದಾಖಲೆಗಳನ್ನು ಪರಾಮರ್ಶೆ ನಡೆಸಿದ ಬಳಿಕ 75 ಪ್ರಕರಣಗಳನ್ನು ಮರು ತನಿಖೆಗೆ ಗುರಿಪಡಿಸಲು ನಿರ್ಧರಿಸಲಾಗಿದೆ. ಈ ತನಿಖೆಯಲ್ಲಿ ಸಹಕರಿಸುವಂತೆ ಸಂತ್ರಸ್ತರನ್ನು ಕೋರಿ ಜಾಹೀರಾತು ನೀಡಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ.
ಸಾರ್ವಜನಿಕ ವಿಚಾರಣೆಗಳನ್ನು ಮುಂದಿನ ಕೆಲ ತಿಂಗಳ ಕಾಲ ನಡೆಸಿ, ಜನರಿಂದ ಮಾಹಿತಿ ಪಡೆಯಲಾಗುವುದು ಎಂದು ಮೂಲಗಳು ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News