ಬೀದಿಮಕ್ಕಳಿಗೆ ಪ್ರವೇಶ ನಿಷೇಧ: ಹೋಟೆಲ್‌ಗೆ ಸಂಕಟ

Update: 2016-06-12 18:36 GMT

ಹೊಸದಿಲ್ಲಿ, ಜೂ.12: ಆರ್ಥಿಕವಾಗಿ ಹಿಂದುಳಿದ ಬೀದಿ ಮಕ್ಕಳನ್ನು ಹೋಟೆಲ್ ಪ್ರವೇಶಿಸದಂತೆ ತಡೆದ ಆರೋಪ ಎದುರಿಸುತ್ತಿರುವ ದಿಲ್ಲಿಯ ಕನೌತ್ ಪ್ಯಾಲೇಸ್‌ನ ಶಿವಸಾಗರ್ ಹೋಟೆಲ್‌ಗೆ ಇದೀಗ ಸಂಕಷ್ಟ ಎದುರಾಗಿದೆ. ದಿಲ್ಲಿ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೋಟೆಲ್ ಲೈಸನ್ಸ್ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿಕೆ ನೀಡಿದ್ದಾರೆ.

ಇದನ್ನು ನಾವು ಸಹಿಸುವುದಿಲ್ಲ. ಇದು ಅಮಾನವೀಯ. ನಮ್ಮ ಸಂವಿಧಾನ ಸಮಾನತೆ ಬಗ್ಗೆ ಮಾತನಾಡುತ್ತದೆ. ನನ್ನ ನಿರೀಕ್ಷೆಯಂತೆ ಆ ಹೋಟೆಲ್‌ನ ಲೈಸನ್ಸ್ ರದ್ದಾಗಲಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
ತನ್ನ ಪತಿಯ ಹುಟ್ಟುಹಬ್ಬದ ಅಂಗವಾಗಿ ಅನಾಥ ಮಕ್ಕಳನ್ನು ಸೋನಾಲಿ ಶೆಟ್ಟಿ ಎಂಬ ಮಹಿಳೆ ಹೋಟೆಲ್‌ಗೆ ಕರೆದೊಯ್ದಿಗ, ಅವರನ್ನು ಒಳಕ್ಕೆ ಬಿಡಲು ಹೋಟೆಲ್ ಮಾಲಕರು ನಿರಾಕರಿಸಿದರು. ತಕ್ಷಣ ಪ್ರತಿಭಟನೆ ಆರಂಭಿಸಿದ ಶೆಟ್ಟಿ, ಹೋಟೆಲ್ ಎದುರು 10 ಗಂಟೆ ಕಾಲ ಧರಣಿ ನಡೆಸಿದರು. ಆಗ ಹೋಟೆಲ್‌ನವರು ಮಕ್ಕಳನ್ನು ಅವಮಾನಿಸಿದ್ದಾರೆ ಎಂದು ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀಮಂತರು ಹಾಗೂ ಬಡವರ ನಡುವೆ ಯಾವುದೇ ಬೇದವಿಲ್ಲ. ಆದರೆ ಜನ ಬಡವರಾದರೆ ಅವರಿಗೆ ಎಲ್ಲರ ಜತೆ ಕುಳಿತು ತಿನ್ನುವ ಹಕ್ಕೂ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಮಕ್ಕಳು ಬೇರೆ ಗ್ರಾಹಕರಿಗೆ ತೊಂದರೆ ಮಾಡುತ್ತಿದ್ದ ಕಾರಣ ಹೊರಗೆ ಕಳುಹಿಸಲಾಗಿದೆ ಎಂದು ಹೋಟೆಲ್ ಸಿಬ್ಬಂದಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ನಮ್ಮ ಅತಿಥಿಗಳಿಗೆ ತೊಂದರೆ ಮಾಡಿದವರನ್ನು ಜಾಗ ಖಾಲಿ ಮಾಡಿಸುವ ಅಧಿಕಾರ ನಮಗಿದೆ. ನಾವು ಯಾವ ತಪ್ಪನ್ನೂ ಮಾಡಿಲ್ಲ ಎಂದು ಹೋಟೆಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ರೋಮಾ ಮಹಾಪಾತ್ರ ಹೇಳಿದ್ದಾರೆ.
ನಿನ್ನೆ ದೀದಿ ನಮ್ಮನ್ನು ರಾತ್ರಿಯ ಊಟಕ್ಕೆ ಕರೆದೊಯ್ದಿದ್ದರು. ಆಗ ಬಂದ ಹೋಟೆಲ್ ಸಿಬ್ಬಂದಿಯೊಬ್ಬ ನಮ್ಮನ್ನು ಹೊರಗಟ್ಟಿದ. ಬಳಿಕ ನಾವು ತಿನ್ನಲು ಬೇರೆಡೆಗೆ ಹೋದೆವು ಎಂದು ಮಕ್ಕಳು ವಿವರಿಸಿದರು.
ಡೆಹ್ರಾಡೂನ್‌ನ ಮಹಿಳೆ ವಾರಾಂತ್ಯಕ್ಕಾಗಿ ದೆಹಲಿಗೆ ಆರಂಭಿಸಿದ್ದರು. ಇದೀಗ ಈ ಪ್ರಕರಣದ ಬೆನ್ನು ಹತ್ತಿ, ತಮ್ಮ ಊರಿಗೆ ವಾಪಸ್ಸಾಗುವ ಕಾರ್ಯಕ್ರಮವನ್ನು ಅವರು ಮುಂದೂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News