‘ಹಿಂದೂ ವಲಸೆ’ ಆರೋಪ ಮಾಡಿದ್ದ ಬಿಜೆಪಿ ಸಂಸದನಿಂದ ತಿಪ್ಪರಲಾಗ

Update: 2016-06-14 07:24 GMT

ಲಕ್ನೊ, ಜೂ.14: ಮುಜಫ್ಫರ್‌ನಗರದ ಕೈರಾನಾ ಪ್ರದೇಶದಿಂದ ಹಿಂದೂಗಳು ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದಾರೆ ಎಂದು ಆರೋಪ ಮಾಡಿದ್ದ ಬಿಜೆಪಿ ಸಂಸದ ಹುಕುಂ ಸಿಂಗ್ ಇದೀಗ ತದ್ವಿರುದ್ಧ ಹೇಳಿಕೆ ನೀಡಿದ್ದು, ಹಿಂದೂ ಕುಟುಂಬಗಳ ವಲಸೆಗೆ ಕೋಮು ಕಾರಣವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಮ್ಮ ತಂಡದಲ್ಲಿದ್ದ ಕೆಲವರು ಬಾಯ್ತಪ್ಪಿನಿಂದ ಹಿಂದೂ ಕುಟುಂಬಗಳು ಎಂದು ಉಲ್ಲೇಖಿಸಿದ್ದಾರೆ. ಅದನ್ನು ಬದಲಿಸಲು ನಾನು ಅವರಿಗೆ ಸೂಚನೆ ನೀಡಿದ್ದೇನೆ. ಇದು ಹಿಂದೂ- ಮುಸ್ಲಿಂ ಸಮಸ್ಯೆಯಲ್ಲ ಎಂಬ ನನ್ನ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಇದು ಬಲವಂತದಿಂದ ಊರು ಬಿಟ್ಟವರ ಪಟ್ಟಿ ಎಂದು ಎನ್‌ಡಿಟಿವಿ ಜೊತೆ ಮಾತನಾಡಿದ ಅವರು ಹೇಳಿದರು.

ದೇಶದ ಕೆಲ ಪ್ರಮುಖ ಮಾಧ್ಯಮಗಳು ಸಿಂಗ್ ಅವರ ಮೂಲ ಹೇಳಿಕೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರ ನೀಡಿದ್ದರಿಂದ, ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರ ಅಲಹಾಬಾದ್‌ನಲ್ಲಿ ನಡೆದ ಎರಡು ದಿನಗಳ ಬಿಜೆಪಿ ಕಾರ್ಯಕಾರಣಿಯಲ್ಲಿ ಕೂಡಾ ಪ್ರಮುಖವಾಗಿ ಚರ್ಚೆಯಾಗಿತ್ತು. ಮುಂದಿನ ವರ್ಷದ ಪ್ರಮುಖ ವಿಧಾನಸಭಾ ಚುನಾವಣೆಯಲ್ಲಿ ಈ ವಿಷಯದ ಆಧಾರದಲ್ಲಿ ರಾಜಕೀಯ ಮೈಲೇಜ್ ಪಡೆಯಲು ಪಕ್ಷದ ಅಧ್ಯಕ್ಷ ಅಮಿತ್ ಷಾ ಶತಾಯಗತಾಯ ಪ್ರಯತ್ನಕ್ಕೆ ಮುಂದಾಗಿದ್ದರು.

ಕಳೆದ ವಾರ ಸಿಂಗ್ ಅವರು 346 ಮಂದಿಯ ಪಟ್ಟಿ ಬಿಡುಗಡೆ ಮಾಡಿ, ಪಶ್ಚಿಮ ಉತ್ತರ ಪ್ರದೇಶದ ಮುಸ್ಲಿಂ ಬಾಹುಳ್ಯದ ಕೈರಾನಾ ಪಟ್ಟಣದಿಂದ ಇವರೆಲ್ಲರೂ ವಲಸೆ ಹೋದವರು ಎಂದು ಹೇಳಿಕೊಂಡಿದ್ದರು. ಕೆಲ ನಿರ್ದಿಷ್ಟ ಸಮುದಾಯದ ಅಪರಾಧಿಗಳ ಬೆದರಿಕೆ ಹಾಗೂ ಸುಲಿಗೆಯಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾಗಿ ಸಂಸದ ಹೇಳಿಕೆ ನೀಡಿದ್ದರು.

ಬಳಿಕ ಮತ್ತೊಂದು ಸುದ್ದಿಗೋಷ್ಠಿಯಲ್ಲಿ, ನಾನು ನನ್ನ ಕಾರ್ಯಕರ್ತರಲ್ಲಿ ಈ ಬಗ್ಗೆ ಖಚಿತ ಮಾಹಿತಿ ಪಡೆಯುವಂತೆ ಕೇಳಿದ್ದೆ. ಕೆಲ ಹೆಸರುಗಳನ್ನು ಇಲ್ಲಿ ಬಹಿರಂಗ ಪಡಿಸುವಂತಿಲ್ಲ. ಆದರೆ ಬಹುತೇಕ ಇದು ಕೋಮು ವಿಚಾರವಲ್ಲ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದು ಸ್ಪಷ್ಟಪಡಿಸಿದರು. ನಿನ್ನೆ ಅಲಹಾಬಾದ್‌ನಲ್ಲಿ ನಡೆದ ಬೃಹರ್ ರ್ಯಾಲಿಯಲ್ಲಿ, ಕೈರಾನಾ ಘಟನೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಅಮಿತ್ ಷಾ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News