ಪ್ರತಿ ಐವರಲ್ಲಿ ಒಬ್ಬ ಹಿರಿಯರಿಗೆ ಮನೆಯಲ್ಲಿ ಕಿರುಕುಳ: ಅಧ್ಯಯನ ವರದಿ

Update: 2016-06-16 03:44 GMT

ಹೊಸದಿಲ್ಲಿ: 60 ವರ್ಷದ ಮಹಿಳೆಯೊಬ್ಬರು 85 ವರ್ಷದ ವೃದ್ಧ ತಾಯಿಗೆ ಹೊಡೆಯುತ್ತಿರುವ ವಿಡಿಯೋ ದೃಶ್ಯ ತುಣುಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹೆಲ್ಪೇಜ್ ಇಂಡಿಯಾ ನಡೆಸಿದ ಸಮೀಕ್ಷೆಯಿಂದ ಇಂಥಹ ಘಟನೆಗಳು ನಿಜ ಎನ್ನುವ ಆಘಾತಕಾರಿ ಅಂಶ ಬಹಿರಂಗವಾಗಿದೆ. ಈ ಅಧ್ಯಯನದ ಪ್ರಕಾರ, ಪ್ರತಿ ಐವರಲ್ಲಿ ಒಬ್ಬರು ಹಿರಿಯ ನಾಗರಿಕರು ಮನೆಯಲ್ಲಿ ಹಿಂಸೆ ಎದುರಿಸುತ್ತಾರೆ. ಅವರ ರಕ್ಷಣೆಗೆ ಕಾನೂನುಗಳು ಇದ್ದರೂ, ಶೇಕಡ 98ರಷ್ಟು ಮಂದಿ ಪ್ರಕರಣ ದಾಖಲಿಸುವುದಿಲ್ಲ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ವಿಶ್ವ ಹಿರಿಯರ ಹಿಂಸೆ ಕುರಿತ ಜಾಗೃತಿ ದಿನ ಅಂಗವಾಗಿ ಈ ಸ್ವಯಂಸೇವಾ ಸಂಸ್ಥೆ, ಇಂಥ ಕಿರುಕುಳದ ಬಗ್ಗೆ ಪ್ರಕರಣ ದಾಖಲಿಸಲು ಮುಂದಾಗಬೇಕು ಎಂದು ಕರೆ ನೀಡಿದೆ. ಸಾಮಾನ್ಯವಾಗಿ ಮಗ, ಮಗಳು ಅಥವಾ ಸೊಸೆಯಂದಿರು ಅಧಿಕ ಕಿರುಕುಳ ನೀಡುತ್ತಾರೆ. ಇದರಲ್ಲಿ ಶೇಕಡ 63.2ರಷ್ಟು ಪ್ರಕರಣಗಳಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕು ಕಾರಣ ಎನ್ನುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ. ದೆಹಲಿಯಲ್ಲಿ ಇಂಥ ಕಿರುಕುಳ ನೀಡಿದ ಬಗ್ಗೆ ಪ್ರತಿ ತಿಂಗಳು ಇಂಥ 150 ಕರೆಗಳು ಸ್ವಯಂಸೇವಾ ಸಂಸ್ಥೆಗೆ ಬರುತ್ತಿವೆ.
ಹೆಲ್ಪೇಜ್ ಇಂಡಿಯಾದ ಸಹಾಯವಾಣಿ ನಿರ್ವಹಿಸುವ ಗೀತಿಕಾ ಸೇನ್ ಗುಪ್ತಾ ಅವರ ಪ್ರಕಾರ,, ಬಹುತೇಕ ಕಿರುಕುಳಗಳು ಆಸ್ತಿ ಹಾಗೂ ಹಣಕ್ಕಾಗಿ. ನೆರೆಯವರು ಅಥವಾ ಹಿತೈಷಿಗಳು ಇಂಥ ಪ್ರಕರಣಗಳ ಬಗ್ಗೆ ದೂರು ನೀಡುತ್ತಾರೆ. ಇಂಥ ಕಿರುಕುಳ ಬಗ್ಗೆ ದೂರು ನೀಡಿದರೆ ಮತ್ತೆ ತಿರುಗುಬಾಣವಾಗಬಹುದು ಎಂಬ ಭೀತಿಯಿಂದ ಬಹುತೇಕ ಮಂದಿ ದೂರು ನೀಡಲು ಮುಂದಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News