ತೆರಿಗೆದಾರರ ಸಂಖ್ಯೆ 10 ಕೋಟಿಗೆ ಹೆಚ್ಚಿಸಿ: ಅಧಿಕಾರಿಗಳಿಗೆ ಮೋದಿ ಸೂಚನೆ

Update: 2016-06-16 18:17 GMT

ಹೊಸದಿಲ್ಲಿ, ಜೂ.16: ತೆರಿಗೆದಾರರ ಮನಸ್ಸಿನಿಂದ ಕಿರುಕುಳದ ಭಯವನ್ನು ನಿವಾರಿಸುವಂತೆ ಹಾಗೂ ಆಡಳಿತದ ಐದು ಸ್ತಂಭಗಳಾದ - ಕಂದಾಯ, ಉತ್ತರದಾಯಿತ್ವ, ಪ್ರಾಮಾಣಿಕತೆ, ಮಾಹಿತಿ ಹಾಗೂ ಡಿಜಿಟೈಸೇಶನ್‌ಗಳ(ರ್ಯಾಪಿಡ್) ಮೇಲೆ ಗಮನ ಕೇಂದ್ರೀಕರಿಸುವಂತೆ ತೆರಿಗೆ ಅಧಿಕಾರಿಗಳಿಗೆ ಗುರುವಾರ ಕರೆ ನೀಡಿದ ಮೋದಿ, ತೆರಿಗೆದಾರರ ಸಂಖ್ಯೆಯನ್ನು ಈಗಿರುವ 5.43 ಕೋಟಿಯಿಂದ 10 ಕೋಟಿಗೆ ಹೆಚ್ಚಿಸಬೇಕಾದ ಅಗತ್ಯವನ್ನೂ ಒತ್ತಿ ಹೇಳಿದ್ದಾರೆ.

ಎರಡು ದಿನಗಳ ‘ರಾಜಸ್ವ ಜ್ಞಾನ ಸಂಗಮ’ವನ್ನುದ್ದೇಶಿಸಿ ಮಾತನಾಡಿದ ಅವರು, ತೆರಿಗೆ ಆಡಳಿತವನ್ನು ಇನ್ನಷ್ಟು ಉತ್ತಮ ಹಾಗೂ ಸಮರ್ಥವನ್ನಾಗಿಸುವುದಕ್ಕಾಗಿ ‘ಡಿಜಿಟೈಸೇಶನ್‌ನತ್ತ ಸಾಗುವಂತೆ’ ಮತ್ತು ‘ವಿಶ್ವಾಸದ ಕೊರತೆ’ಯನ್ನು ತುಂಬುವತ್ತ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ. ತೆರಿಗೆದಾರರ ಮನಸ್ಸಿನಿಂದ ಕಿರುಕುಳದ ಭಯವನ್ನು ಕಿತ್ತೊಗೆಯಲು ಅಧಿಕಾರಿಗಳು ಪಣತೊಡಬೇಕು.
ಅವರ ನಡವಳಿಕೆ ‘ಮೃದು ಹಾಗೂ ಉದಾತ್ತ’ ವಾಗಿರಬೇಕೆಂದು ಮೋದಿ ಸಲಹೆ ನೀಡಿದರೆಂದು ಸಭೆಯ ಕುರಿತು ಪತ್ರಕರ್ತರಿಗೆ ವಿವರ ನೀಡಿದ ಕೇಂದ್ರ ಸಹಾಯಕ ವಿತ್ತ ಸಚಿವ ಜಯಂತ ಸಿನ್ಹಾ ತಿಳಿಸಿದರು.

ಎರಡು ದಿನಗಳ ವಾರ್ಷಿಕ ಸಮ್ಮೇಳನದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ನೇರ ತೆರಿಗೆ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಹಾಗೂ ಅಬ್ಕಾರಿ ಹಾಗೂ ಸೀಮಾ ಸುಂಕಗಳ ಕೇಂದ್ರೀಯ ಮಂಡಳಿಗಳ(ಸಿಬಿಇಸಿ) ಹಿರಿಯ ತೆರಿಗೆ ಆಡಳಿತದಾರರು ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News