ಆಮ್ ಆದ್ಮಿ ವಕ್ತಾರೆ ಅಲ್ಕಾ ಅಮಾನತು

Update: 2016-06-16 18:27 GMT


ಹೊಸದಿಲ್ಲಿ, ಜೂ.16: ಭ್ರಷ್ಟಾಚಾರ ಆರೋಪ ಹೊತ್ತ ಸಚಿವರೊಬ್ಬರ ರಾಜೀನಾಮೆ ಕುರಿತು ಭಿನ್ನ ಹೇಳಿಕೆ ನೀಡಿದ ಆರೋಪದ ಮೇಲೆ ಆಮ್ ಆದ್ಮಿ ಪಾರ್ಟಿಯ ವಕ್ತಾರೆ ಅಲ್ಕಾ ಲಾಂಬಾ ಅವರನ್ನು ಹುದ್ದೆಯಿಂದ ಕಿತ್ತೊಗೆಯಲಾಗಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶದಂತೆ ದಿಲ್ಲಿಯ ಸಾರಿಗೆ ಸಚಿವ ಗೋಪಾಲ್ ರೈ ರಾಜೀನಾಮೆ ನೀಡಿದ್ದಾರೆಂದು ಅಲ್ಕಾ ಹೇಳಿದ ಕೆಲವೇ ಗಂಟೆಗಳಲ್ಲಿ ಆಕೆಯ ವಿರುದ್ಧ ಕ್ರಮ ಜರಗಿಸಲಾಗಿದೆ. ರೈ ಅವರು ಆರೋಗ್ಯ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದಾರೆಂದು ಪಕ್ಷ ಇದಕ್ಕೂ ಮುಂಚೆ ಹೇಳಿಕೊಂಡಿತ್ತು.
‘‘ನಾನು ಪಕ್ಷದ ಶಿಸ್ತಿನ ಕಾರ್ಯಕರ್ತೆ ಹಾಗೂ ಅದರ ಎಲ್ಲ್ಲ ನಿರ್ಧಾರಗಳನ್ನೂ ಗೌರವಿಸುತ್ತೇನೆ. ಅರಿಯದೆ ನಾನೇನಾದರೂ ತಪ್ಪುಮಾಡಿದ್ದರೆ ಅದನ್ನು ಸರಿ ಪಡಿಸಿಕೊಳ್ಳುತ್ತೇನೆ. ನನ್ನಿಂದ ಭ್ರಷ್ಟಾಚಾರ ವಿರುದ್ಧದ ಪಕ್ಷದ ಹೋರಾಟಕ್ಕೆ ತಡೆಯಾಗಬಾರದು’’ ಎಂದು ಎರಡು ತಿಂಗಳುಗಳ ಕಾಲ ಅಮಾನತು ಆದೇಶ ಪಡೆದಿರುವ ಅಲ್ಕಾ ಟ್ವೀಟ್ ಮಾಡಿದ್ದಾರೆ.
ಖಾಸಗಿ ಬಸ್ ಆಪರೇಟರ್ ಒಬ್ಬರಿಗೆ ಸರಕಾರ ಕಳೆದ ತಿಂಗಳು ಜಾರಿಗೊಳಿಸಿದ ಯೋಜನೆಯ ಪ್ರಯೋಜನ ದೊರೆಯುವಂತೆ ಮಾಡಲು ರೈ ಸಹಾಯ ಮಾಡಿದ್ದರು ಎಂಬ ಆರೋಪ ಅವರ ಮೇಲಿತ್ತು. ಆದರೆ ಸಾರಿಗೆ ಸಚಿವಾಲಯದ ಕೆಲಸದ ಹೊರೆಯನ್ನು ಇತ್ತೀಚೆಗೆ ಶಸ್ತ್ರಕ್ರಿಯೆಗೊಳಗಾದ ಸಚಿವರಿಗೆ ನಿಭಾಯಿಸಲು ಕಷ್ಟವಾಗಬಹುದೆಂದು ಅವರು ರಾಜೀನಾಮೆ ನೀಡಿದ್ದರೆಂದು ಪಕ್ಷ ಹೇಳಿತ್ತು. ಹಲವಾರು ವರ್ಷಗಳಿಂದ ತಮ್ಮ ಕುತ್ತಿಗೆಯಲ್ಲಿ ಉಳಿದಿದ್ದ ಬುಲೆಟ್ ಒಂದನ್ನು ತೆಗೆಯಲು ಸಚಿವರು ಇತ್ತೀಚೆಗೆ ಶಸ್ತ್ರಕ್ರಿಯೆಗೆ ಒಳಗಾಗಿದ್ದರು.
ಆದರೆ ಅಲ್ಕಾ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಸಚಿವರ ವಿರುದ್ಧದ ಆರೋಪದ ನಿಷ್ಪಕ್ಷಪಾತ ತನಿಖೆಗೆ ಸಹಕಾರಿಯಾಗಲು ಅವರಿಗೆ ರಾಜೀನಾಮೆ ನೀಡಲು ಹೇಳಲಾಗಿತ್ತು ಎಂದಿದ್ದರು. ಅವರ ವಿರುದ್ಧದ ಆರೋಪದಲ್ಲಿ ಹುರುಳಿಲ್ಲವೆಂದು ವಾದಿಸುತ್ತಿರುವ ಪಕ್ಷಕ್ಕೆ ಅಲ್ಕಾ ಹೇಳಿಕೆ ಸಿಟ್ಟು ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News