ಜಿಶಾ ಕೊಲೆ ಆರೋಪಿಯ ಮನೆಯಿದು: ಮಗನ ಅಪರಾಧ ತಿಳಿದು ಅಮ್ಮ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು!

Update: 2016-06-18 05:48 GMT

ನೌಗಾಂವ್(ಅಸ್ಸಾಂ), ಜೂನ್ 18: ಜಿಶಾ ಕೊಲೆ ಆರೋಪಿ ಅಮೀರುಲ್ ಇಸ್ಲಾಮ್ ಅಪರಾಧ ಹಿನ್ನೆಲೆಯ ವ್ಯಕ್ತಿ ಎಂಬುದಕ್ಕೆ ಅಸ್ಸಾಮ್ ಪೊಲೀಸರಲ್ಲಿ ಯಾವುದೇ ಮಾಹಿತಿಯಿಲ್ಲ. ಈತ ಜಿಶಾರನ್ನು ಕೊಲೆಗೈಯ್ಯುವುದಕ್ಕಿಂತ ಮೊದಲು ಅಸ್ಸಾಮ್‌ನಲ್ಲಿ ಯಾವುದೇ ಅಪರಾಧ ಕೃತ್ಯವೆಸಗಿದ್ದಕ್ಕೂ ಪುರಾವೆ ಇಲ್ಲ. ಈತನ ವಿರುದ್ಧ ಅಲ್ಲಿ ಕೇಸುಗಳು ದಾಖಲಾಗಿಲ್ಲ ಎಂದು ನೌಗಾಂವ್ ಪೊಲೀಸ್ ಮುಖ್ಯಸ್ಥ ವೈ.ಟಿ.ಗ್ಯಾಟ್‌ಸೊ ಹೇಳಿದ್ದಾರೆ.

 ಕೇರಳದಿಂದ ಮಾಹಿತಿ ಸಿಕ್ಕಿದ ಆಧಾರದಲ್ಲಿ ಮನೆಯನ್ನು ಹುಡುಕಿ ಬಂದ ಅಸ್ಸಾಂ ಪೊಲೀಸರ ಮೂಲಕ ತನ್ನ ಪುತ್ರ ಕೊಲೆಪಾತಕ ಆರೋಪದಲ್ಲಿ ಕೇರಳದಲ್ಲಿ ಬಂಧಿಸಲ್ಪಟ್ಟಿದ್ದಾನೆ ಎಂದು ಅಮೀರ್‌ನ ತಾಯಿ ಖದೀಜಾ ರಿಗೆ ತಿಳಿದಿದೆ. ಮಗ ಅಪರಾಧಗೈದಿದ್ದಾನೆಂದು ತಾನು ನಂಬುವುದಿಲ್ಲ ಎನ್ನುತ್ತಾ ಖದೀಜಾ ಪ್ರಜ್ಞೆ ಕಳಕೊಂಡು ಕುಸಿದು ಬಿದ್ದರು. ಬಾರ್ದ್ವಾದಲ್ಲಿ ಬಾಂಗ್ಲಾದಿಂದ ವಲಸೆ ಬಂದವರು ಹೆಚ್ಚು ವಾಸಿಸುತ್ತಿದ್ದಾರೆ. ಆದರೆ ನಾವು ಇಲ್ಲಿಯೇ ಹುಟ್ಟಿಬೆಳೆದವರೆಂದು ಖದೀಜಾ ಹೇಳುತ್ತಿದ್ದಾರೆ. ಅಮೀರ್‌ನ ತಂದೆಗೆ ವೋಟರ್ಸ್‌ ಐಡಿ ಕಾರ್ಡ್ ಇದೆ.

ಮಗ ಪೊಲೀಸರ ವಶವಾಗಿದ್ದಾನೆ ಎಂದು ಅರಿತ ತಂದೆ ನಿಝಾಮುದ್ದೀನ್ ಮನೆಯಿಂದ ಹೊರಟು ಹೋದವರು ಇನ್ನೂ ಬಂದಿಲ್ಲ. ಎಲ್ಲಿಗೆ ಹೋಗಿದ್ದಾರೆ. ಏನಾಗಿದ್ದಾರೆ ಎಂದು ಯಾವ ಮಾಹಿತಿಯೂ ಗೊತ್ತಾಗಿಲ್ಲ. ಕೇರಳ ಪೊಲೀಸ್‌ನಿಂದ ಮಾಹಿತಿ ಸಿಕ್ಕಿದ ಬಳಿಕ ನಿನ್ನೆ ಬಾರ್ದ್ವಾಪೊಲೀಸ್ ಅಮೀರ್‌ನ ಮನೆಕಂಡು ಹುಡುಕಿದೆ ಎಂದು ಎಸ್ಸೈ ಮಹೇಶ್ವರ್ ಸೈಕಿಯಾ ಹೇಳಿದ್ದಾರೆ.

ಬಡರೈತರು ವಾಸಿಸುವ ಬಾರ್ದ್ವಾ ಗ್ರಾಮದಲ್ಲಿ ಅಮೀರ್ ಕುಟಂಬ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದೆ. ತಂದೆ ನಿಝಾಮುದ್ದೀನ್, ತಾಯಿ ಖದೀಜಾ, ನಾಲ್ವರು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳ ತುಂಬು ಸಂಸಾರ ಇದೇ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದೆ. ಗಂಡು ಮಕ್ಕಳಲ್ಲಿ ಅಮೀರ್ ಚಿಕ್ಕವನು. ಈತನ ಸಹೋದರ ಬದರುಲ್ ಇಸ್ಲಾಮ್ ಕೇರಳದಲ್ಲಿಯೇ ಕೆಲಸ ಮಾಡುತ್ತಿದ್ದಾನೆ ಎಂದು ತಾಯಿ ಖದೀಜಾ ಹೇಳುತ್ತಾರೆ.

  ಅಸ್ಸಾಮ್ ಚುನಾವಣೆಗೆ ಮೊದಲು ಎಪ್ರಿಲ್‌ನಲ್ಲಿ ಅಮೀರ್ ಕೊನೆಯ ಬಾರಿ ನೌಗಾಂವ್‌ಗೆ ಬಂದಿದ್ದ ಎಂದು ಸಂಬಂಧಿಕರು ಹಾಗೂ ನೆರೆಯವರು ವಿವರಿಸಿದ್ದಾರೆ. ಪ್ರಾಥಮಿಕ ಶಾಲೆಗೆ ಆತನ ವಿದ್ಯಾಭ್ಯಾಸ ಕೊನೆಗೊಂಡಿದೆ. ನಂತರ ತಂದೆಯೊಂದಿಗೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದ. ಹೆಚ್ಚು ಸಂಬಳ ಸಿಗುತ್ತದೆ ಎಂದು ಕೇರಳಕ್ಕೆ ಕೆಲಸಕ್ಕೆ ಹೋಗಿದ್ದ. ಆರುವರ್ಷದ ನಂತರ ಕಳೆದ ಚುನಾವಣೆಗಿಂತ ಸ್ವಲ್ಪಮೊದಲು ಊರಿಗೆ ಬಂದು ಹೋಗಿದ್ದ. ಈತನಿಗೆ ಫೋನ್ ಇದೆ ಎಂಬುದು ಗೊತ್ತಿಲ್ಲ. ಯಾವತ್ತೂ ಆತ ಮನೆಗೆ ಫೋನ್ ಮಾಡಿಲ್ಲ ಎಂದು ತಾಯಿ ತಿಳಿಸಿದ್ದಾರೆ.

ಮದ್ಯಪಾನ ಮಾಡುವುದಲ್ಲದೆ ಈತ ಮತ್ತ್ಯಾವ ಗಲಾಟೆಯನ್ನೂ ಮಾಡಿದವನಲ್ಲ ಎಂದು ನೆರೆಹೊರೆಯ ನಿವಾಸಿಗಳು ಹೇಳಿದ್ದಾರೆ. ಆರೋಪಿಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಕೇರಳ ಪೊಲೀಸ್ ಅಸ್ಸಾಂಗೆ ತೆರಳಲಿದೆ. ಆರೋಪಿಯ ಬೆರಳಚ್ಚು ಕೇರಳ ಪೊಲೀಸ್ ಕಳುಹಿಸಿದೆ ಎಂದು ಎಸ್ಪಿ ಗ್ಯಾಟ್‌ಸೊ ಹೇಳಿದರು. ಆರೋಪಿ ಬೇರೆ ಅಪರಾಧಕೃತ್ಯಗಳಲ್ಲಿ ಭಾಗವಹಿಸಿದ್ದಾನೆಯೇ ಎಂದು ಕಂಡುಹಿಡಿಯುವುದಕ್ಕಾಗಿ ಬೆರಳಚ್ಚು ನೆರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News