ಎಹ್ಸಾನ್ ಗುಂಡೆಸೆತವೇ ಗುಂಪು ಕೆರಳುವುದಕ್ಕೆ ಕಾರಣವಂತೆ!

Update: 2016-06-18 18:41 GMT

ಅಹ್ಮದಾಬಾದ್, ಜೂ.18: 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಬಲಿಯಾದ 69 ಮಂದಿಯಲ್ಲಿ ಒಬ್ಬರಾದ ಎಹ್ಸಾನ್ ಜಾಫ್ರಿ, ಗಲಭೆನಿರತರ ಮೇಲೆ ಗುಂಡು ಹಾರಿಸಿದ್ದೇ ಇಡೀ ಘಟನೆ ಭೀಕರ ತಿರುವನ್ನು ಪಡೆಯಲು ಕಾರಣವಾಯಿತೆಂದು ನ್ಯಾಯಾಲಯ ಶುಕ್ರವಾರ ತಿಳಿಸಿರುವುದು ಗಲಭೆ ಸಂತ್ರಸ್ತರನ್ನು ಆಘಾತಕ್ಕೀಡು ಮಾಡಿದೆ. ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ 11 ಮಂದಿ ದೋಷಿಗಳಿಗೆ ಜೀವಾವಧಿ ಹಾಗೂ ಉಳಿದ 13 ಮಂದಿಗೆ ಕಡಿಮೆ ಪ್ರಮಾಣದ ಶಿಕ್ಷೆಯನ್ನು ಘೋಷಿಸಿದ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

 ಗೋಧ್ರಾ ರೈಲು ದಹನ ಘಟನೆಯ ಬಳಿಕ ಗುಜರಾತ್‌ನಾದ್ಯಂತ ಭುಗಿಲೆದ್ದ ಗಲಭೆಯ ಸಂದರ್ಭದಲ್ಲಿ 2002ರ ಫೆಬ್ರವರಿಯಲ್ಲಿ ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿ ವಸತಿ ಸಂಕೀರ್ಣದಲ್ಲಿ ದಾಳಿ ನಡೆಸಿದ್ದ ಗುಂಪಿನ ಮೇಲೆ ಎಹ್ಸಾನ್ ಜಾಫ್ರಿ ಗುಂಡುಹಾರಿಸಿದ್ದರು. ಇದು ಗಲಭೆಕೋರರನ್ನು ಕೆರಳಿಸಿತೆಂದು ಅಲಹಾಬಾದ್‌ನ ವಿಶೇಷ ನ್ಯಾಯಾಲಯ ತೀರ್ಮಾನಿಸಿದೆ.
 ‘‘ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡವು ನಾಗರಿಕ ಸಮಾಜದ ಇತಿಹಾಸದಲ್ಲಿಯೇ ಅತ್ಯಂತ ಕರಾಳ ಘಟನೆಯಾಗಿದೆ’’ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಬಣ್ಣಿಸಿದೆ. ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಹಿಂಸಾಚಾರದಲ್ಲಿ, ಭಾರೀ ಜನರಿದ್ದ ಗುಂಪೊಂದು, ವಸತಿ ಸಂಕೀರ್ಣದಲ್ಲಿ ವಾಸವಾಗಿದ್ದ ಎಹ್ಸಾನ್ ಜಾಫ್ರಿ ಹಾಗೂ ಇತರರನ್ನು ಹೊರಗೆಳೆದು,ಮಾರಕಾಸ್ತ್ರಗಳಿಂದ ಕಡಿಯಿತು ಹಾಗೂ ಅವರನ್ನು ಜೀವಂತವಾಗಿ ದಹಿಸಿತ್ತು. ನೆರವಿಗಾಗಿ ಜಾಫ್ರಿ ಅವರು ಪೊಲೀಸ್ ಅಧಿಕಾರಿಗಳು ಹಾಗೂ ಕೆಲವು ಹಿರಿಯ ರಾಜಕಾರಣಿಗಳಿಗೆ ಕರೆ ಮಾಡಿದ್ದರೂ, ಅದಕ್ಕೆ ಅವರ್ಯಾರೂ ಸ್ಪಂದಿಸಲಿಲ್ಲವೆನ್ನಲಾಗಿದೆ.
    ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಘಟನೆಯನ್ನು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಪಿ.ಬಿ. ದೇಸಾಯಿ ಸಮಗ್ರವಾಗಿ ವಿಶ್ಲೇಷಿಸುತ್ತಾ ‘‘ನನ್ನ ಅಭಿಪ್ರಾಯದ ಪ್ರಕಾರ, ಮೃತ ಎಹ್ಸಾನ್ ಜಾಫ್ರಿ ನಡೆ ಸಿದ ಗುಂಡೆಸೆತವು ಗಲಭೆನಿರತರ ಗುಂಪಿನಲ್ಲಿದ್ದ ಕೆಲವರ ಸಾವಿಗೆ ಹಾಗೂ ಇನ್ನು ಕೆಲವರು ಗಾಯಗೊಳ್ಳಲು ಕಾರಣವಾಯಿತು’’ ಎಂದು ಹೇಳಿದ್ದಾರೆ.
 ಎಹ್ಸಾನ್ ಜಾಫ್ರಿ ಗುಲ್ಬರ್ಗ್ ಸೊಸೈಟಿಯ ಹೊರಗಡೆ ಜಮಾಯಿಸಿದ್ದ ಗುಂಪಿನ ಮೇಲೆ ಹಲವು ಬಾರಿ ಗುಂಡುಹಾರಿಸಿದ್ದುದು ಸ್ಪಷ್ಟವಾಗಿ ದೃಢಪಟ್ಟಿದೆಯೆಂದು ನ್ಯಾಯಾಧೀಶರು ತಿಳಿಸಿದ್ದಾರೆ.
ತನ್ಮಧ್ಯೆ ಎಹ್ಸಾನ್ ಜಾಫ್ರಿ ಅವರ ಪುತ್ರ ತನ್ವೀರ್ ಅವರು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದಾರೆ. ‘‘ತೀರ್ಪಿನಿಂದ ನಮಗೆ ಸಂತಸವಾಗಿಲ್ಲ. ಎಹ್ಸಾನ್ ಜಾಫ್ರಿ ಗೆಲವು ಗುಂಡುಗಳನ್ನು ಹಾರಿಸಿದ್ದರೆಂದು, ಘಟನೆಯ ಸಾಕ್ಷಿದಾರನೂ ಆಗಿರುವ ಸಂತ್ರಸ್ತರೊಬ್ಬರು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಹೀಗಿರುವಾಗ ಪೊಲೀಸರು ಆ ಸಾಕ್ಷಿಯನ್ನು ಯಾಕೆ ನ್ಯಾಯಾಲಯದಲ್ಲಿ ಹಾಜರುಪಡಿಸಿಲ್ಲ’’ ಎಂದವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News