ಮಧ್ಯಪ್ರದೇಶದಲ್ಲಿ ನ್ಯಾಯಮೂರ್ತಿಗಳ ಔತಣಕೂಟಕ್ಕೆ ಬೆಳ್ಳಿಯ ಬಟ್ಟಲು-ಲಕ್ಷಾಂತರ ಖರ್ಚು!

Update: 2016-06-19 13:17 GMT

ಭೋಪಾಲ್, ಜೂ.19: ಈ ವರ್ಷ ಎಪ್ರಿಲ್‌ನಲ್ಲಿ ಮಧ್ಯಪ್ರದೇಶ ಸರಕಾರ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಹಾಗೂ ಸರ್ವೋಚ್ಚ ನ್ಯಾಯಾಲಯದ ಇತರ ನ್ಯಾಯಮೂರ್ತಿಗಳು, ಅವರ ಪತ್ನಿಯರು ಸಹಿತ ಸುಮಾರು 240 ಮಂದಿ ವಿವಿಐಪಿಗಳು ಭಾಗವಹಿಸಿದ್ದರು. ಅವರಿಗೆಲ್ಲ ಬೆಳ್ಳಿಯ ಬಟ್ಟಲುಗಳಲ್ಲಿ ಉಣಬಡಿಸಲಾಗಿದ್ದು, ಲಕ್ಷಾಂತರ ವೌಲ್ಯದ ಉಡುಗೊರೆಗಳನ್ನು ನೀಡಲಾಗಿತ್ತು.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟಿಸಿದ್ದ ಈ ಕಾರ್ಯಕ್ರಮಕ್ಕಾಗಿ ಉಳಿದುಕೊಂಡಿದ್ದ ಅವಧಿಯಲ್ಲಿ ಎಲ್ಲ ಆಮಂತ್ರಿತರಿಗೆ ‘ಸರಕಾರಿ ಅತಿಥಿಗಳ’ ಸ್ಥಾನ ಮಾನವನ್ನು ನೀಡಲಾಗಿತ್ತು. ಈ ಮಾಹಿತಿಯನ್ನು ಅಜಯ್ ದುಬೆ ಎಂಬ ಸಾಮಾಜಿಕ ಕಾರ್ಯಕರ್ತ ಆರ್‌ಟಿಐ ಮನವಿಗೆ ಉತ್ತರವಾಗಿ ಪಡೆದಿದ್ದಾರೆ.

ಎ.14ರಂದು ‘ನ್ಯಾಯಮೂರ್ತಿಗಳ ರಿಟ್ರೀಟ್’ ಕಾರ್ಯಕ್ರಮದ ವೇಳೆ ರಾಜ್ಯ ಸರಕಾರ ಆತಿಥೇಯತ್ವ ವಹಿಸಿದ್ದ ಈ ಔತಣ ಕೂಟಕ್ಕಾಗಿ ರೂ. 6.94 ಲಕ್ಷ ಖರ್ಚು ಮಾಡಲಾಗಿದೆ. ಸುಮಾರು ರೂ. 3.75 ಲಕ್ಷಗಳಷ್ಟು ಬೆಳ್ಳಿಯ ಬಟ್ಟಲುಗಳಿಗೆ ಹಾಗೂ ರೂ. 3.37 ಲಕ್ಷವನ್ನು ಆಹಾರಕ್ಕಾಗಿ ಪಾವತಿಸಲಾಗಿದೆಯೆಂದು ಸರಕಾರ ಒದಗಿಸಿರುವ ಕಡತ ಟಿಪ್ಪಣಿಗಳು ತಿಳಿಸಿವೆ.

ಪಾರಂಪರಿಕವಾಗಿ, ಇಂತಹ ಸಂದರ್ಭಗಳಲ್ಲಿ ಸರಕಾರದ ಇಂತಹ ಔತಣಕೂಟಗಳ ವ್ಯವಸ್ಥೆಯನ್ನು ಮಧ್ಯಪ್ರದೇಶ ರಾಜ್ಯ ಪ್ರವಾಸೋದ್ಯಮ ಇಲಾಖೆ ಮಾಡುತ್ತದೆ. ಆದರೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣರ ಪ್ರಧಾನ ಕಾರ್ಯದರ್ಶಿಯ ಸೂಚನೆಯಂತೆ ಕೊಟೇಶನ್‌ಗಳನ್ನು ಆಹ್ವಾನಿಸಲಾಗಿತ್ತು ಹಾಗೂ ಇಂದೋರ್‌ನ ಪ್ರಖ್ಯಾತ ಪಾಕ ಶಾಸ್ತ್ರಜ್ಞರೊಬ್ಬರನ್ನು ನಿಯುಕ್ತಿಗೊಳಿಸಲು ನಿರ್ಧರಿಸಲಾಗಿತ್ತೆಂದು ಅವು ಹೇಳಿವೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಸ್ಥಾನಮಾನಕ್ಕೆ ಸರಿಯಾಗಿ ಬೆಳ್ಳಿಯ ಬಟ್ಟಲುಗಳ ವ್ಯವಸ್ಥೆ ಮಾಡಲಾಗಿತ್ತೆಂದು ಟಿಪ್ಪಣಿಗಳು ತಿಳಿಸಿವೆ.

ಚಹಾಕೂಟ ಹಾಗೂ ಉಡುಗೊರೆಗಳ ಖರ್ಚಿಗಾಗಿ ಕಾರ್ಯಕ್ರಮಕ್ಕೆ ರೂ. 3,17,270 ರ ಬಿಲ್ಲನ್ನು ಮಂಜೂರು ಮಾಡಲಾಗಿತ್ತೆಂದು ಟಿಪ್ಪಣಿಗಳು ತಿಳಿಸಿವೆ.

ಎಲ್ಲ ನ್ಯಾಯಮೂರ್ತಿಗಳು ಮತ್ತವರ ಪತ್ನಿಯರಿಗೆ ಬೆಳ್ಳಿಯ ಬಟ್ಟಲುಗಳಲ್ಲಿ ಔತಣ ಹಾಗೂ ಉಡುಗೊರೆಗಳನ್ನು ತೆರಿಗೆದಾರರ ಹಣದಿಂದ ನೀಡಲಾಗಿದೆ. ತಾವು ಔತಣಕ್ಕೆ ವಿರೋಧಿಗಳಲ್ಲ. ಆದರೆ, ಬೆಳ್ಳಿಯ ಬಟ್ಟಲುಗಳು ಹಾಗೂ ಉಡುಗೊರೆಗಳ ಖರ್ಚು ಅನವಶ್ಯವಾದುದೆಂದು ದುಬೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುಬೆ ದಾಖಲಿಸಿದ್ದ ಇನ್ನೊಂದು ಆರ್‌ಟಿಐ ಮನವಿಗುತ್ತರವಾಗಿ, ರಾಷ್ಟ್ರೀಯ ನ್ಯಾಯಾಂಗ ಅಕಾಡಮಿಯು(ಎನ್‌ಜೆ), ಕಾರ್ಯಕ್ರಮಕ್ಕೆ ಮಾಡಿದ್ದ ಖರ್ಚಿನ ವಿವರವನ್ನು ಬಹಿರಂಗಪಡಿಸಬೇಕಾದರೆ, ‘ಆತಿಥ್ಯ’ ಎನ್ನುದನ್ನು ವ್ಯಾಖ್ಯಾನಿಸುವಂತೆ ಅವರಿಗೆ ತಿಳಿಸಿತ್ತು.

ಎ.16ರಂದು ಅಕಾಡಮಿಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ 4ನೆ ರಿಟ್ರೀಟ್‌ನ 4 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಅಕಾಡಮಿಯು ಕೇಂದ್ರ ಸರಕಾರ ನಡೆಸುತ್ತಿರುವ, ನ್ಯಾಯಾಂಗ ಅಧಿಕಾರಿಗಳ ತರಬೇತಿ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News