ದಲಿತರನ್ನು ಹಂದಿಗೆ ಹೋಲಿಸಿದ ಮಹಾರಾಷ್ಟ್ರ ಬಿಜೆಪಿ ಶಾಸಕ

Update: 2016-06-20 18:24 GMT

ಮುಂಬೈ, ಜೂ.20: ದೊಂಬಿವಿಲಿಯ ಬಿಜೆಪಿ ಶಾಸಕ ರವೀಂದ್ರ ಚವಾಣ್ ಅವರು ದಲಿತರನ್ನು ಹಂದಿಗಳೊಂದಿಗೆ ಹೋಲಿಕೆ ಮಾಡಿ ಮಾತನಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಥಾಣೆಯಲ್ಲಿ ಸ್ಮಾರ್ಟ್‌ಸಿಟಿಗೆ ಸಂಬಂಧಪಟ್ಟ ಕಾರ್ಯಕ್ರಮವೊಂದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಬಿಜೆಪಿ ಶಾಸಕ ರವೀಂದ್ರ ಈ ಪ್ರಮಾದ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತ ವೀಡಿಯೊವೊಂದು ಬಹಿರಂಗವಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರವೀಂದ್ರ, ಅಮೆರಿಕದ ಮಾಜಿ ಅಧ್ಯಕ್ಷ ದಿವಂಗತ ಅಬ್ರಹಾಂ ಲಿಂಕನ್ ಕೊಳಚೆಯಲ್ಲಿ ಬಿದ್ದಿದ್ದ ಹಂದಿಯನ್ನು ಎತ್ತಿ ಅದನ್ನು ಶುಚಿಮಾಡಿದ ಕುರಿತ ಕಥೆ ಹೇಳಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೂ ದಲಿತರನ್ನು ಮೇಲೆತ್ತಲು ಇದೇ ರೀತಿ ಶ್ರಮಿಸುತ್ತಿದ್ದಾರೆ ಎಂದು ಹೇಳಿಬಿಟ್ಟರು.

 ಇದೀಗ ರಾಜ್ಯದ ದಲಿತ ಸಂಘಟನೆಗಳು ಹಾಗೂ ವಿಪಕ್ಷ ರವೀಂದ್ರರ ವಿರುದ್ಧ ತಿರುಗಿಬಿದ್ದಿವೆ. ಅವರು ಬೇಷರತ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿವೆ. ಥಾಣೆಯ ಎನ್‌ಸಿಪಿ ಜಿಲ್ಲಾ ಘಟಕ ನಾಮಕರಣ ಕಾರ್ಯಕ್ರಮವೊಂದನ್ನು ಆಯೋಜಿಸಿ ಹಂದಿಯೊಂದಕ್ಕೆ ರವೀಂದ ಚವಾಣ್ ಎಂದು ಹೆಸರಿಟ್ಟಿದೆ. ಈ ಹಿಂದೆ ಬಿಜೆಪಿ ನಾಯಕ, ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರು ದಲಿತರನ್ನು ನಾಯಿಗಳಿಗೆ ಹೋಲಿಸಿ ಭಾಷಣ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News