ರಮಝಾನ್ ಸಹರಿ ತಪ್ಪಿಸದಂತೆ ನೆರವಾಗುತ್ತಿದೆ ಹಿಂದೂ ಕುಟುಂಬ

Update: 2016-06-21 05:54 GMT

ಆಝಂಗಢ(ಉತ್ತರಪ್ರದೇಶ), ಜೂ.21: ಬನಾರಸಿ ಸೀರೆಗೆ ಖ್ಯಾತಿ ಪಡೆದಿರುವ ಉತ್ತರ ಪ್ರದೇಶದ ಮುಬಾರಕ್ ಪುರವೆಂಬ ಗ್ರಾಮದಲ್ಲಿ ರಾತ್ರಿ ಮೂರು ಗಂಟೆಗೆ ಎಲ್ಲರೂ ನಿದ್ದೆಗೆ ಜಾರಿರುತ್ತಾರೆ. ಆದರೆ, ಹಿಂದೂ ಕುಟುಂಬಕ್ಕೆ ಸೇರಿದ ಓರ್ವ ವ್ಯಕ್ತಿ ತನ್ನ 12 ವರ್ಷದ ಪುತ್ರನೊಂದಿಗೆ ಸದಾ ಎಚ್ಚರದಲ್ಲೇ ಇರುತ್ತಾರೆ.

ಈಗ ಮುಸ್ಲಿಮರು ರಮಝಾನ್ ತಿಂಗಳ ಉಪವಾಸ ಆಚರಿಸುತ್ತಿದ್ದು, ಹಳ್ಳಿಯ ಎಲ್ಲ ಮುಸ್ಲಿಮ್ ಕುಟುಂಬದವರನ್ನು ಬೇಗನೆ ಎಬ್ಬಿಸಿ ಸಹರಿಗೆ ನೆರವಾಗುವುದು ಈ ಇಬ್ಬರ ಪ್ರತಿ ದಿನದ ಕೆಲಸವಾಗಿದೆ. ಗುಲಾಬ್ ಯಾದವ್(45) ಹಾಗೂ ಅವರ ಮಗ ಅಭಿಷೇಕ್ ಮುಸ್ಲಿಮ್ ಕುಟುಂಬದವರ ಮನೆಯ ಬಾಗಿಲು ಬಡಿದು ಅವರನ್ನು ಎಬ್ಬಿಸುತ್ತಾರೆ. ಈ ಸಂಪ್ರದಾಯ ಇಂದು-ನಿನ್ನೆಯದಲ್ಲ. ಕಳೆದ 45 ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಯಾದವ್‌ರ ತಂದೆ ಚಿರ್ಕಿಟ್ ಯಾದವ್ 1975ರಲ್ಲಿ ಈ ಸಂಪ್ರದಾಯವನ್ನು ಆರಂಭಿಸಿದ್ದು, ಆಗ ಗುಲಾಬ್ ಯಾದವ್‌ಗೆ ನಾಲ್ಕು ವರ್ಷ ಪ್ರಾಯವಾಗಿತ್ತು.

ದಿನಗೂಲಿ ಕಾರ್ಮಿಕನಾಗಿರುವ ಗುಲಾಬ್ ಯಾದವ್ ಹೆಚ್ಚಿನ ಸಮಯವನ್ನು ದಿಲ್ಲಿಯಲ್ಲೆ ಕಳೆಯುತ್ತಾರೆ. ರಮಝಾನ್ ವೇಳೆಗೆ ಉತ್ತರ ಪ್ರದೇಶದ ಅಝಂಗಢ ಜಿಲ್ಲೆಯಲ್ಲಿರುವ ತನ್ನ ಹಳ್ಳಿಗೆ ವಾಪಸಾಗುತ್ತಾರೆ.

‘‘ಇದು ನಿಜವಾಗಿಯೂ ಪ್ರಶಂಸನೀಯ ಕಾರ್ಯವಾಗಿದೆ. ರಮಝಾನ್ ತಿಂಗಳಲ್ಲಿ ಯಾದವ್ ಅವರು ಇಡೀ ಹಳ್ಳಿಯನ್ನು ಸುತ್ತುತ್ತಾರೆ. ಅವರಿಗೆ ಹಳ್ಳಿ ಸುತ್ತಲು 90 ನಿಮಿಷ ಬೇಕಾಗುತ್ತದೆ. ಎಲ್ಲರೂ ಮುಂಜಾನೆಯ ಶಹರಿ ತಪ್ಪಿಸಿಕೊಳ್ಳಬಾರದೆಂಬ ಉದ್ದೇಶದಿಂದ ಎರಡೆರಡು ಬಾರಿ ಊರನ್ನು ಸುತ್ತು ಬರುತ್ತಾರೆ’’ ಎಂದು ಯಾದವ್ ನೆರೆಮನೆಯಾತ ಶಫೀಕ್ ಹೇಳುತ್ತಾರೆ.

 ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ರಾಜ್ಯ ಚುನಾವಣೆಯು ನಡೆಯುತ್ತಿರುವ ಕಾರಣ ಬಿಜೆಪಿಯು ಹಿಂದೂ-ಮುಸ್ಲಿಮರನ್ನು ಎತ್ತಿ ಕಟ್ಟಲು ಆರಂಭಿಸಿದೆ. ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕೈರಾನ ಪ್ರದೇಶವನ್ನು ಹಿಂದೂ ಕುಟುಂಬಗಳು ತೊರೆಯುತ್ತಿವೆ ಎನ್ನುವುದು ಬಿಜೆಪಿಯ ವಾದವಾಗಿದೆ. ಇದೀಗ ಆಝಂಗಢದ ಯಾದವ್ ಎಲ್ಲರಿಗೂ ಮಾದರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News