ಕಲಬುರ್ಗಿಯ ನರ್ಸಿಂಗ್ ಹಾಸ್ಟೆಲ್‌ನಲ್ಲಿ ರ್ಯಾಗಿಂಗ್: ಕೇರಳದ ದಲಿತ ವಿದ್ಯಾರ್ಥಿನಿ ಗಂಭೀರ

Update: 2016-06-21 09:02 GMT

 ಎಡಪ್ಪಾಲ್, ಜೂನ್ 21: ಹಿರಿಯ ನರ್ಸಿಂಗ್ ವಿದ್ಯಾರ್ಥಿನಿಯರ ರ್ಯಾಂಗಿಗ್ ನಿಂದಾಗಿ ಪ್ರಥಮ ವರ್ಷದ ದಲಿತ ವಿದ್ಯಾರ್ಥಿನಿಯೊಬ್ಬಳನ್ನು ಕೋಝಿಕ್ಕೋಡ್ ಮೆಡಿಕಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಎಡಪ್ಪಾಲದ ಕಾಲಡಿ ಕಳರಿಕ್ಕಲ್ ಪರಂಬ್ ಜಾನಕಿ ಎಂಬವರ ಪುತ್ರಿ ಅಶ್ವತಿ(19), ಈ ನತದೃಷ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಕರ್ನಾಟಕದ ಕಲಬುರ್ಗಿಯ ಖಾಸಗಿ ನರ್ಸಿಂಗ್ ಕಾಲೇಜು ಹಾಸ್ಟೆಲ್‌ನಲ್ಲಿ ಹಿರಿಯ ವಿದ್ಯಾರ್ಥಿನಿಯರು ಅಶ್ವತಿಗೆ ಟಾಯ್ಲೆಟ್ ಕ್ಲೀನರ್‌ನ್ನು ಬಲವಂತದಿಂದ ಕುಡಿಸಿದ್ದರಿಂದ ಆಕೆ ಗಂಭೀರವಾಗಿ ಅಸ್ವಸ್ಥಗೊಂಡಿದ್ದಳು. ಆಹಾರ ಸೇವಿಸಲು ಸಾಧ್ಯವಿಲ್ಲದ ಅಶ್ವತಿಗೆ ಈಗ ಜೀವವುಳಿಸಲಿಕ್ಕಾಗಿ ಆಸ್ಪತ್ರೆಯಲ್ಲಿ ದ್ರಾವಕ ಆಹಾರಗಳನ್ನು ಟ್ಯೂಬ್ ಮುಖಾಂತರ ನೀಡಲಾಗುತ್ತಿದೆ. ಮೇ ಒಂಬತ್ತರಂದು ರಾತ್ರಿ ಕೇರಳದ ವಿದ್ಯಾರ್ಥಿನಿಯರ ತಂಡ ಗಂಟೆಗೂ ಮೀರಿದ ಅವಧಿಯಲ್ಲಿ ಅಶ್ವತಿಯನ್ನು ರ್ಯಾಗಿಂಗ್‌ಗೆ ಗುರಿಪಡಿಸಿದ್ದರು. ಅತಿಕ್ರೂರವಾದ ರ್ಯಾಗಿಂಗ್‌ನ ವಿವಿಧ ಭಂಗಿಗಳನ್ನು ಮೊಬೈಲ್‌ನಲ್ಲಿ ಚಿತ್ರಿಸಿ ಈ ತಂಡ ಆಹ್ಲಾದಾಚರಿಸಿ, ಕೊನೆಯಲ್ಲಿ ಬಾಯಿಗೆ ಟಾಯ್ಲೆಟ್ ಕ್ಲೀನರ್ ಸುರಿದಿತ್ತು. ಅಳು ಕೇಳಿ ಓಡಿಬಂದ ಹಾಸ್ಟೆಲ್‌ನ ಇತರ ವಿದ್ಯಾರ್ಥಿನಿಯರು ಅಶ್ವತಿಯನ್ನು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ನಾಲ್ಕು ದಿವಸಗಳ ಕಾಲ ಐಸಿಯುಯಲ್ಲಿ ಒಂದು ದಿವಸ ಕ್ಯಾಶುವಲಿಟಿಯಲ್ಲಿದ್ದ ಅಶ್ವತಿಯಿಂದ ಸಾಕ್ಷ್ಯಪಡೆಯಲು ಪೊಲೀಸರು ಬಂದಿದ್ದರೂ ಆಕೆಗೆ ಮಾತಾಡಲು ಸಾಧ್ಯವಾಗಲಿಲ್ಲ. ಈ ನಡುವೆ ಘಟನೆ ಹೊರಗೆ ಹೇಳಬಾರದೆಂದು ಹಿರಿಯ ವಿದ್ಯಾರ್ಥಿನಿಯರು ಬೆದರಿಕೆಹಾಕಿದ್ದರು. ಪೊಲೀಸ್ ಪುನಃ ಸಾಕ್ಷ್ಯ ಪಡೆಯಲು ಬರುತ್ತಿದ್ದಾರೆ ಎಂದು ಗೊತ್ತಾಗಿ ಆಸ್ಪತ್ರೆಯವರ ಅನುಮತಿಯಿಲ್ಲದೆ ಡಿಸ್ಚಾರ್ಜ್ ಮಾಡಿ ರೂಮ್‌ಮೇಟ್ ಆದ ವಿದ್ಯಾರ್ಥಿನಿಗಳ ಜೊತೆ ಊರಿಗೆ ಕಳುಹಿಸಿದ್ದಾರೆ. ಮನೆಯವರು ಎಡಪ್ಪಾಲ್ ಆಸ್ಪತ್ರೆಗೆ ಮತ್ತು ತೃಶೂರು ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನ ಆಗಿಲ್ಲ. ನಂತರ ಕೋಝಿಕ್ಕೋಡ್ ಮೆಡಿಕಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಮಗಳ ಆರೋಗ್ಯಸ್ಥಿತಿ ಗಂಭೀರಾವಸ್ಥೆಯಲ್ಲಿದ್ದು ಬಡ ಕುಟುಂಬ ಅಪರಾಧಿಗಳ ವಿರುದ್ಧ ಕಾನೂನುಕ್ರಮಕೈಗೊಳ್ಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ವಿಷಯ ತಿಳಿದು ಎಡಪ್ಪಾಲದ ವಕೀಲರಾದ ಕೆ.ಪಿ.ಮುಹಮ್ಮದ್ ಶಾಫಿ, ಅಶ್ವತಿಯನ್ನು ಸಂದರ್ಶಿಸಿ ಘಟನೆಯ ಕುರಿತು ಬರೆದು ತೆಗೆದುಕೊಂಡಿದ್ದಾರೆ. ಈ ಮಾಹಿತಿ ಆಧಾರದಲ್ಲಿ ಕರ್ನಾಟಕ, ಕೇರಳ ಮುಖ್ಯಮಂತ್ರಿ ಡಿಜಿಪಿಗಳಿಗೆ ಹಾಗೂ ಸಂಬಂಧಿಸಿದ ಖಾತೆಗಳ ಸಚಿವರಿಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News