ಎರಡನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನೇತೃತ್ವ

Update: 2016-06-21 17:57 GMT

ಚಂಡಿಗಡ, ಜೂ.21: ಪ್ರಧಾನಿ ನರೇಂದ್ರ ಮೋದಿ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಚಂಡಿಗಡದಲ್ಲಿ 30 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಸೇರಿಕೊಂಡಿದ್ದಾರೆ. ಈ ಪುರಾತನ ಆಧ್ಯಾತ್ಮಿಕ ಶಿಸ್ತಿನಿಂದ ಡಯಾಬಿಟೀಸ್‌ನಂತಹ ರೋಗಗಳ ಚಿಕಿತ್ಸೆಗಾಗಿ ಅವರು ದನಿಯೆತ್ತಿದ್ದಾರೆ.

ಬಿಳಿಯ ಟಿ-ಶರ್ಟ್, ಚಡ್ಡಿ ಹಾಗೂ ಸ್ಕಾರ್ಫ್ ಧರಿಸಿದ್ದ ಮೋದಿ, ಬಿಗಿ ಭದ್ರತೆಯ ನಡುವೆ ಇಲ್ಲಿನ ರಾಜಧಾನಿ ಸಂಕೀರ್ಣದಲ್ಲಿ ನಡೆದ 2ನೆ ಅಂತಾರಾಷ್ಟ್ರೀಯ ಯೋಗ ಸಮಾರಂಭದಲ್ಲಿ, ರಕ್ಷಣಾ ಪಡೆಗಳ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಸೇರಿದಂತೆ 30 ಸಾವಿರಕ್ಕೂ ಹೆಚ್ಚು ಭಾಗಿದಾರಿಗಳ ನೇತೃತ್ವ ವಹಿಸಿದರು.
ನಿನ್ನೆ ರಾತ್ರಿಯೇ ಇಲ್ಲಿಗಾಗಮಿಸಿದ್ದ ಪ್ರಧಾನಿ, ‘ಸಾಮಾನ್ಯ ಯೋಗ ಶಿಷ್ಟಾಚಾರ’ದ ಸಾಮೂಹಿಕ ಪ್ರದರ್ಶನದಲ್ಲಿ ಪಾಲ್ಗೊಂಡರು. ಸ್ವತಃ ಯೋಗದಲ್ಲಿ ಆಸಕ್ತಿಯಿರುವ ಅವರು, ಕಾರ್ಯಕ್ರಮದಲ್ಲಿ ಜನರೊಂದಿಗೆ ಯೋಗಾಸನಗಳನ್ನು ಹಾಕಿದರು.
ಚಂಡಿಗಡ, ಪಂಜಾಬ್ ಹಾಗೂ ಹರ್ಯಾಣಗಳಿಂದ ತಲಾ ಸುಮಾರು 10 ಸಾವಿರ ಮಂದಿಯಂತೆ ಎಲ್ಲ ವಯೋಮಾನದ 30 ಸಾವಿರಕ್ಕೂ ಹೆಚ್ಚು ಜನರು ಗುಲಾಬಿ ಮತ್ತು ನೀಲಿ ಬಣ್ಣಗಳ ಚಾಪೆಗಳ ಮೇಲೆ ಯೋಗಾಭ್ಯಾಸ ಮಾಡಿದರು. ಚಂಡಿಗಡದ ಇತರ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಸುಮಾರು 10 ಸಾವಿರ ಮಂದಿ ಪ್ರತ್ಯೇಕವಾಗಿ ಯೋಗಾಭ್ಯಾಸ ಮಾಡಿದರು.
ಈ ಮೊದಲು, ಸೇರಿದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘‘ನಾನು ಯೋಗಕ್ಕೆ ಸಂಬಂಧಿಸಿದ ತರಬೇತುದಾರರಿಗೆ ಈ ಸಾರ್ವಜನಿಕ ವೇದಿಕೆಯಿಂದ ಮನವಿಯೊಂದನ್ನು ಮಾಡಲಿದ್ದೇನೆ. ಮುಂದಿನ ವರ್ಷದಿಂದ ನಾವು ಯೋಗ ದಿನವನ್ನು ಆಚರಿಸುವಾಗ, ಈ ಒಂದು ವರ್ಷದಲ್ಲಿ ನೀವು ಯೋಗಕ್ಕಾಗಿ ಏನು ಮಾಡುವಿರೋ ಅದನ್ನೇ ಮುಂದುವರಿಸಿ. ಆದರೆ, ಒಂದು ವಿಷಯದ ಮೇಲೆ ಗಮನ ನೀಡಿರಿ. ಡಯಾಬಿಟೀಸ್- ಇದು ನನ್ನ ವಿಷಯ- ಡಯಾಬಿಟೀಸ್ ಮತ್ತು ಯೋಗ’’ ಎಂದರು.
ಹೆಚ್ಚುತ್ತಿರುವ ಡಯಾಬಿಟೀಸ್ ರೋಗಿಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ರೋಗವನ್ನು ನಿಯಂತ್ರಿಸಲು ಸಹಾಯ ಮಾಡುವಂತೆ ಯೋಗ ತರಬೇತುದಾರರಿಗೆ ಮನವಿ ಮಾಡಿದರು.
ಯೋಗವು ಕೇವಲ ರೋಗದಿಂದ ವಿಮುಕ್ತಿ ಪಡೆಯುವ ಮಾರ್ಗವಲ್ಲ. ಬದಲಾಗಿ ಅದು ಆರೋಗ್ಯದ ಭರವಸೆ ನೀಡುತ್ತದೆ. ಜೀವನದ ಸಮಗ್ರ ಅಭಿವೃದ್ಧಿಗೆ ಯೋಗವು ಅತ್ಯುತ್ತಮ ಮಾರ್ಗವಾಗಿದೆಯೆಂದು ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News