ಅಸಾರಾಮ್ ಟ್ರಸ್ಟ್ ಗಳ ಆದಾಯ ಎಷ್ಟು ಸಾವಿರ ಕೋಟಿ ಗೊತ್ತೇ ?

Update: 2016-06-22 12:45 GMT

 ಹೊಸದಿಲ್ಲಿ, ಜೂ.22: ಸ್ವಯಂಘೋಷಿತ ದೇವ ಮಾನವ ಅಸಾರಾಂ ಬಾಪುವಿನ ದತ್ತಿ ಪ್ರತಿಷ್ಠಾನದ ರೂ. 2,300 ಕೋಟಿ ಅಘೋಷಿತ ಆದಾಯವನ್ನು ಪತ್ತೆಹಚ್ಚಿರುವುವೆನೆಂದು ಆದಾಯ ತೆರಿಗೆ ಇಲಾಖೆಯು ಮಂಗಳವಾರ ಹೇಳಿದೆ. ಪ್ರತಿಷ್ಠಾನಕ್ಕೆ ನೀಡಲಾಗಿರುವ ಯಾವುದೇ ತೆರಿಗೆ ವಿನಾಯ್ತಿಯನ್ನು ರದ್ದುಪಡಿಸುವಂತೆ ಅದು ಶಿಫಾರಸು ಮಾಡಿದೆಯೆಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಅಸಾರಾಂ ಹಾಗೂ ಆತನ ಅನುಯಾಯಿಗಳ ಆಸ್ತಿಗಳ ಕುರಿತಾಗಿ ನಡೆಯುತ್ತಿರುವ ತನಿಖೆಯ ವೇಳೆ ಇಲಾಖೆಯು ಈ ಅವ್ಯವಹಾರವನ್ನು ಪತ್ತೆಹಚ್ಚಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರಖು ಠೇವಣಿ, ಮ್ಯೂಚುವಲ್ ಫಂಡ್, ರಿಯಲ್ ಎಸ್ಟೇಟ್ ಹಾಗೂ ಕಿಸಾನ್ ವಿಕಾಸ್ ಪತ್ರಗಳಂತಹ ವಿವಿಧ ವಲಯಗಳಲ್ಲಿ ‘ಬೇನಾಮಿ’ ವ್ಯವಹಾರಗಳನ್ನೂ ಪತ್ತೆ ಹಚ್ಚಲಾಗಿದೆಯೆಂದು ಅವರು ಹೇಳಿದ್ದಾರೆ.

ಅಸಾರಾಂ ಹಾಗೂ ಆತನ ಅನುಯಾಯಿಗಳು ದೇಣಿಗೆಗಳನ್ನು ಅಡಗಿಸುವ ಮಾರ್ಗವಾಗಿ ಜನರು ಹಾಗೂ ವ್ಯಾಪಾರಗಳಿಗೆ ಕಡಿಮೆ ದರದಲ್ಲಿ ಹಲವು ದಶಕಗಳಿಂದ ಸಾಲ ನೀಡುತ್ತಿದ್ದುದು ತಿಳಿದುಬಂದಿದೆ.

ಆದಾಗ್ಯೂ, ತನಿಖೆಯ ವಿವರ ಒಂದು ಪಿತೂರಿ ಹಾಗೂ ಹಿಂದೂ ಧರ್ಮದ ಮೇಲಿನ ದಾಳಿಯೆಂದು ಸಂತಶ್ರೀ ಅಸಾರಾಂಜಿ ಆಶ್ರಮದ ವಕ್ತಾರರೊಬ್ಬರು ದೂರಿದ್ದಾರೆ.

ಅಸಾರಾಂ ಹಾಗೂ ಆತನ ಅನುಯಾಯಿಗಳು ದೇಶಾದ್ಯಂತ 400ಕ್ಕೂ ಹೆಚ್ಚು ಆಶ್ರಮಗಳನ್ನು ಸ್ಥಾಪಿಸಿದ್ದು, ಅವುಗಳಿಗೆಲ್ಲ ತೆರಿಗೆ ವಿನಾಯ್ತಿ ನೀಡಲಾಗಿದೆ. ಆದಾಯ ತೆರಿಗೆ ಇಲಾಖೆಯು ಇಂತಹ ಹಲವು ಆಸ್ತಿಗಳ ಮೇಲೆ ದಾಳಿ ನಡೆಸಿದ್ದು, ಅವುಗಳ ಆರ್ಥಿಕ ವ್ಯವಹಾರಗಳ ಕುರಿತಾದ ಸಾವಿರಾರು ಪುಟಗಳಷ್ಟು ದಾಖಲೆಗಳು ಹಾಗೂ ನೂರಾರು ಜಿಬಿಗಳಷ್ಟು ಮಾಹಿತಿಯನ್ನು ಹೊರ ತೆಗೆದಿದೆ. ಆದರೆ, ತೆರಿಗೆಗಳ್ಳತನದ ಕುರಿತು ಹೇಳಿಕೆ ದಾಖಲಿಸಲು ಅಸಾರಾಂ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News