ಮಳೆಗೆ 100ಕ್ಕೂ ಅಧಿಕ ಬಲಿ

Update: 2016-06-22 17:28 GMT

ಲಕ್ನೊ, ಜೂ.22: ಉತ್ತರಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿ ದುರ್ಘಟನೆಗಳಿಗೆ 40ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಮಂಗಳವಾರ ರಾಜ್ಯದಲ್ಲಿ ಭಾರೀ ಮಳೆಯೊಂದಿಗೆ ಸಿಡಿಲು ಕೂಡ ಅನೇಕ ಭಾಗಗಳಲ್ಲಿ ಅಪ್ಪಳಿಸಿದೆ.
ವಾರಣಾಸಿ ಹಾಗೂ ಅಝಂಗಡ ವಿಭಾಗಗಳಲ್ಲಿ 24 ಮತ್ತು ಬಸ್ತಿ ಹಾಗೂ ಗೋರಖಪುರ ವಿಭಾಗಗಳಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಸಿಡಿಲಿನ ಹೊಡೆತಕ್ಕೆ ಕಾನ್ಪುರದಲ್ಲಿ ಮೂವರು ಅಸುನೀಗಿದ್ದರೆ, ಲಕ್ನೊ ವಿಭಾಗದಲ್ಲಿ ನಾಲ್ವರು ಬಲಿಯಾಗಿದ್ದಾರೆಂದು ಅವರು ತಿಳಿಸಿದ್ದಾರೆ.
ಗರಿಷ್ಠ ಸಾವುಗಳು ಬಲಿಯಾ(8), ಘಾಝಿಪುರ(6), ಜಾನ್ಪುರ(3), ಮಾವು(2) ಹಾಗೂ ಸೋನ್‌ಭದ್ರಾ(1) ಗಳಿಂದ ವರದಿಯಾಗಿವೆ. ಅಝಂಗಡ, ಚಂದೌಲಿ ಹಾಗೂ ವಾರಣಾಸಿಗಳಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ.
ಸಿದ್ಧಾರ್ಥ ನಗರದ ಭರ್ವಾಲಿಯಾ ಗ್ರಾಮದಲ್ಲಿ ಮೂವರು, ಮಹಾರಾಜ್‌ಗಂಜ್‌ನಲ್ಲಿ ಒಬ್ಬ, ದೇವೋರಿಯಾದಲ್ಲಿ ಇಬ್ಬರು ಹಾಗೂ ಕೂಶಿನಗರ್‌ನಲ್ಲಿ ನಾಲ್ವರು ಸಿಡಿಲಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಜಿಲ್ಲಾಡಳಿತಗಳು ಪರಿಹಾರ ಕಾರ್ಯಾಚರಣೆ ಕೈಗೊಂಡಿದೆ. ಮೃತರ ಕುಟುಂಬಗಳಿಗೆ ಪ್ರಕೃತಿ ವಿಕೋಪದಿಂದಾದ ಸಾವುಗಳ ಸಂದರ್ಭದಲ್ಲಿ ಪರಿಹಾರ ನೀಡಲಿರುವ ನಿಯಮ ಹಾಗೂ ನಿಬಂಧನೆಗಳನ್ವಯ ಪರಿಹಾರ ನೀಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
50 ಮಂದಿ ಸಿಡಿಲಿಗೆ ಬಲಿ
ಬಿಹಾರದಲ್ಲಿ ಸಿಡಿಲಿಗೆ ಸುಮಾರು 60 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅದರ ಪರಿಣಾಮವನ್ನು ನಿಭಾಯಿಸುವುದಕ್ಕಾಗಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಇಂದು ತುರ್ತು ಪ್ರತಿಕ್ರಿಯಾ ಅಧಿಕಾರಿಗಳ ಸಭೆಯೊಂದನ್ನು ನಡೆಸಿದ್ದಾರೆ.
ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಿಹಾರದ ವಿವಿಧ ಭಾಗಗಳಲ್ಲಿ-ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಕನಿಷ್ಠ 56 ಮಂದಿ ಮೃತರಾಗಿದ್ದು, ಇತರ 24 ಮಂದಿ ಗಾಯಗೊಂಡಿದ್ದಾರೆ. ರಾಜ್ಯದ ರಾಜಧಾನಿ ಪಾಟ್ನಾದಿಂದ 4 ಸಾವುಗಳು ವರದಿಯಾಗಿವೆ. ಪಾಟ್ನಾ ಮತ್ತು ರೊಹ್ಟಕ್‌ಗಳಲ್ಲಿ ಸಿಡಿಲಿನಿಂದಾಗಿ 16 ಮಂದಿ ಗಾಯಗೊಂಡಿದ್ದಾರೆ.
 ತಾವು 47 ಸಾವುಗಳ ಬಗ್ಗೆ ಖಚಿತಪಡಿಸಿಕೊಂಡಿದ್ದೇವೆ. ಇತರ ಜಿಲ್ಲೆಗಳಿಂದ ವರದಿಗಳ ಮಹಾಪೂರವೇ ಬರುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯಿದೆಯೆಂದು ಬಿಹಾರ ಪ್ರಕೃತಿ ವಿಕೋಪ ಪ್ರಬಂಧನ ಸಂಸ್ಥೆಯ ಹಿರಿಯಾಧಿಕಾರಿ ಅನಿರುದ್ಧಕುಮಾರ್ ತಿಳಿಸಿದ್ದಾರೆ.
ರಾಜ್ಯ ಸರಕಾರವು ಸಾವಿಗೀಡಾದವರ ಕುಟುಂಬಗಳಿಗೆ ತಲಾ ರೂ. 4 ಲಕ್ಷ ಪರಿಹಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News