ಡಾ.ಗೂಗಲ್ ಇನ್ನು ನೀಡಲಿದೆ ನಿಖರ ಆರೋಗ್ಯ ಮಾಹಿತಿ

Update: 2016-06-22 17:32 GMT

ಹೊಸದಿಲ್ಲಿ, ಜೂ.22: ಇಂಟರ್ನೆಟ್ ಬಳಕೆದಾರರ ಆದ್ಯತೆಯ ಸರ್ಚ್ ಇಂಜಿನ್ ಗೂಗಲ್ ಹೊಸದಾಗಿ, ಹೆಲ್ತ್ ಸಿಂಪ್ಟಮ್ ಚೆಕ್ಕರ್ ಎಂಬ ಹೊಸ ವೈದ್ಯಕೀಯ ತಪಾಸಣಾ ಸಾಧನವನ್ನು ಪರಿಚಯಿಸಿದೆ, ಇದು ಬಳಕೆದಾರರ ಆರೋಗ್ಯದ ಬಗ್ಗೆ ನಿಖರವಾದ ಮಾಹಿತಿ ನೀಡಲಿದ್ದು, ಸ್ವಯಂ ತಪಾಸಣೆಗೆ ಜನರಿಗೆ ಅನುಕೂಲವಾಗಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ಸಾಧನವನ್ನು ಅಮೆರಿಕದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಗೂಗಲ್ ಪ್ರಕಟಿಸಿದೆ.

ಆರೋಗ್ಯ ಸ್ಥಿತಿ ಎಂದು ಹುಡುಕಿದರೆ ಮಾತ್ರ ಡಾಟಾಬೇಸ್‌ನಲ್ಲಿ ದೃಢೀಕರಣವಾದ ಆರೋಗ್ಯ ಸ್ಥಿತಿ ಬಗ್ಗೆ ವರದಿ ಬರುತ್ತದೆ. ಗೂಗಲ್ ನಿಖರವಾದ ಮಾಹಿತಿ ನೀಡುತ್ತಿದೆ ಎನ್ನುವುದನ್ನು ಖಚಿತಪಡಿಸಲು ತಜ್ಞವೈದ್ಯರ ತಂಡ ಕಾರ್ಯನಿರ್ವಹಿಸುತ್ತದೆ ಎಂದು ಗೂಗಲ್ ವಿವರಿಸಿದೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಮತ್ತು ಮಾಯೊ ಕ್ಲಿನಿಕ್‌ನ ತಜ್ಞ ವೈದ್ಯರ ಜತೆ ಸೇರಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರಾತಿನಿಧಿಕವಾದ ಮಾದರಿಗಳನ್ನು ಸಂಗ್ರಹಿಸಿ, ಅದನ್ನು ವಿಶ್ಲೇಷಿಸಿ ನೀಡಿರುವ ವರದಿಯನ್ನು ತಜ್ಞ ವೈದ್ಯರು ಪರಿಶೀಲಿಸಿದ್ದಾರೆ ಎಂದು ಪ್ರಾಡಕ್ಟ್ ಮ್ಯಾನೇಜರ್ ವೆರೊನಿಕ ಪಿಂಚಿನ್ ಪ್ರಕಟಿಸಿದ್ದಾರೆ.
ಸದ್ಯಕ್ಕೆ ಫಲಿತಾಂಶಗಳು ಅಮೆರಿಕದ ಬಳಕೆದಾರರಿಗೆ ಮಾತ್ರ ಇಂಗ್ಲಿಷ್‌ನಲ್ಲಿ ಲಭ್ಯವಾಗಲಿವೆ. ಹಂತಹಂತವಾಗಿ, ಇದನ್ನು ವಿವಿಧ ದೇಶಗಳಲ್ಲಿ ಹಾಗೂ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಇನ್ನಷ್ಟು ರೋಗಲಕ್ಷಣಗಳನ್ನು ಕೂಡಾ ಪರಿವಿಡಿಗೆ ಸೇರಿಸಲಾಗುವುದು ಎಂದು ವಿವರಿಸಿದ್ದಾರೆ.
ಕೆಲ ಸಾಮಾನ್ಯ ರೋಗಲಕ್ಷಣಗಳ ವಿವರಣೆಯನ್ನೂ ನೀಡಲಾಗಿದೆ. ಸ್ವಯಂ ಚಿಕಿತ್ಸೆಯ ಆಯ್ಕೆಗಳನ್ನೂ ನೀಡಲಾಗಿದೆ. ಉನ್ನತ ಮಟ್ಟದ ತಪಾಸಣೆ ಅಗತ್ಯವಿದ್ದರೆ ಆ ಮಾಹಿತಿಯನ್ನೂ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News