ಕಳರಿಯಪಟ್ಟು ಕರಗತ ಮಾಡಿಕೊಂಡ 76 ವರ್ಷದ ಮೀನಾಕ್ಷಿ ಅಮ್ಮ!

Update: 2016-06-22 17:36 GMT

ತಿರುವನಂತಪುರ, ಜೂ.22: ಕೇರಳದ ವಟಕರದಲ್ಲಿ ವಾಸಿಸುವ ಮೀನಾಕ್ಷಮ್ಮ ದೇಶಾದ್ಯಂತ ಚಿರಪರಿಚಿತ ಹೆಸರು. ಏಕೆ ಎಂಬ ಅಚ್ಚರಿಯೇ? 76ನೆ ವಯಸ್ಸಿನಲ್ಲಿ ಕೇರಳದ ಪ್ರಾಚೀನ ಯುದ್ಧಕಲೆಯಾದ ಕಳರಿಯಪಟ್ಟು ಅಭ್ಯಸಿಸಿ ಈಗ ಬೇರೆಯವರಿಗೆ ಅದನ್ನು ಬೋಧಿಸುವ ಅಪೂರ್ವ ಸಾಧನೆ ಮಾಡಿರುವುದು ಇದಕ್ಕೆ ಕಾರಣ. ಮೀನಾಕ್ಷಮ್ಮ ದೊಣ್ಣೆ, ಖಡ್ಗ, ಗುರಾಣಿ ಹಾಗೂ ಕಠಾರಿಯಲ್ಲಿ ಪುರುಷರನ್ನೂ ಮೀರಿಸುವ ಯುದ್ಧಕೌಶಲ ಪ್ರದರ್ಶಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಜೂನ್ 16ರಂದು ಫೇಸ್‌ಬುಕ್‌ನಲ್ಲಿ ಈ ವೀಡಿಯೊ ಪೋಸ್ಟ್ ಮಾಡಲಾಗಿದ್ದು, ಸುಮಾರು 9 ಲಕ್ಷ ಬಾರಿ ಇದನ್ನು ವೀಕ್ಷಿಸಿರುವುದು, ಮೀನಾಕ್ಷಮ್ಮ ಅವರ ಯುದ್ಧಕೌಶಲದ ಜನಪ್ರಿಯತೆಗೆ ಸಾಕ್ಷಿ. ಈ ಕಿರು ವೀಡಿಯೊದಲ್ಲಿ ಮೀನಾಕ್ಷಮ್ಮ ಸೀರೆ ಸೆರಗನ್ನು ಸೊಂಟಕ್ಕೆ ಕಟ್ಟಿಕೊಂಡು, ನಿಖರತೆಯಿಂದ ಒಬ್ಬ ಪುರುಷನ ವಿರುದ್ಧ ಬೆತ್ತ ಬೀಸುವ ದೃಶ್ಯವಿದೆ. ಆಕೆಗಿಂತ ತೀರಾ ಕಡಿಮೆ ವಯಸ್ಸಿನ ಈತ ವಿದ್ಯಾರ್ಥಿಯಾಗಿರಬೇಕು ಎಂದು ಅಂದಾಜು ಮಾಡಲಾಗಿದೆ. ಈ ಅದ್ಭುತ ಕೌಶಲವನ್ನು ಕಂಡ ಪ್ರೇಕ್ಷಕರು ಕೇಕೆ ಹಾಕುವ, ಶಿಳ್ಳೆ ಹೊಡೆಯುವ ಹಾಗೂ ಪ್ರಚಂಡ ಕರತಾಡನ ಮಾಡುವ ದೃಶ್ಯಾವಳಿ ಇದೆ.
ಕೇರಳ ಮೂಲದ ಕಳರಿಯಪಟ್ಟು, ವಿಶ್ವದ ಅತ್ಯಂತ ಪ್ರಾಚೀನ ಯುದ್ಧಕಲೆಗಳಲ್ಲೊಂದಾಗಿದ್ದು, ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News