ಅಪಘಾತಂಗಳ ಕ್ಷಮಿಸೋ...

Update: 2016-06-22 17:43 GMT

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಸ್ತೆ ಅಪಘಾತಗಳ ಕುರಿತು ಬಿಡುಗಡೆಗೊಳಿಸಿದ ಅಧಿಕೃತ ಮಾಹಿತಿಯು ಬೆಚ್ಚಿ ಬೀಳಿಸುವಂತಿದೆ. ಈ ಮಾಹಿತಿಯ ಪ್ರಕಾರ 2015ನೆ ವರ್ಷದಲ್ಲಿ 1.46 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಗತಿಸಿದರು. 2014ರ ಅಂಕಿಸಂಖ್ಯೆಗೆ ಹೋಲಿಸಿದರೆ ಈ ಪ್ರಮಾಣ 5 ಶೇಕಡಾ ಹೆಚ್ಚೆಂದು ತಿಳಿದು ಬಂದಿದೆ. ಅಂದರೆ ದಿನವೂ ಸುಮಾರು 400 ಮಂದಿ ಸಾವನ್ನಪ್ಪುತ್ತಾರೆ; ಸಾವು ಸಂಭವಿಸದ ಅಪಘಾತಗಳನ್ನೂ ಸೇರಿಸಿದರೆ ಈ ಸಂಖ್ಯೆ 5.01 ಲಕ್ಷ ಅಥವಾ ದಿನಕ್ಕೆ 374 ಅಪಘಾತಗಳು; ಈ ಸಂಖ್ಯೆ 2014ನೆ ಸಾಲಿಗಿಂತ 2.5 ಶೇಕಡಾ ಹೆಚ್ಚು.

ರಸ್ತೆ ಅಪಘಾತಗಳಲ್ಲಿ ಬಲಿಯಾದವರಲ್ಲಿ ಶೇಕಡಾ 54.1ರಷ್ಟು ಮಂದಿ 15ರಿಂದ 34 ವಯೋಮಾನದವರೆಂದರೆ ಅಪಘಾತಗಳ ಭೀಕರತೆಯ ಅರಿವಾದೀತು. ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಕೇರಳ ಮತ್ತು ಉತ್ತರಪ್ರದೇಶ ಸೇರಿದಂತೆ 13 ರಾಜ್ಯಗಳು ಅತೀ ಹೆಚ್ಚು ಅಪಘಾತಗಳ ತವರೂರಾಗಿವೆ. ಮಹಾನಗರಗಳ ಪೈಕಿ ಮುಂಬೈಯಲ್ಲಿ ಅತೀ ಹೆಚ್ಚು ಅಂದರೆ 23,468 ಅಪಘಾತಗಳಾಗಿದ್ದರೆ, ದಿಲ್ಲಿಯಲ್ಲಿ ಅತೀ ಹೆಚ್ಚು ಅಂದರೆ 1622 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತಗಳ ಹೊಣೆಯಲ್ಲಿ ಚಾಲಕರ ತಪ್ಪು77.1 ಶೇಕಡ. ಮಿತಿಮೀರಿದ ವೇಗದ ಚಾಲನೆಯೇ ಈ ಅಪಘಾತಗಳಿಗೆ ಕಾರಣವೆನ್ನಲಾಗಿದೆ ಮತ್ತು ಇವಿಷ್ಟು ಮಾಹಿತಿಯ ಆಧಾರದಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಸರಕಾರ ಕ್ರಮಕೈಗೊಳ್ಳುತ್ತದೆಂದು ನಂಬಲಾಗಿದೆ.

ಅಪಘಾತಗಳು ಸಂಭವಿಸುತ್ತವೆ. ಯಾರೂ ಉದ್ದೇಶಪೂರ್ವಕ ಅಪಘಾತಗಳನ್ನು ಮಾಡುವುದಿಲ್ಲವೆಂಬ ಮಾತಿದೆ. ಅದಕ್ಕಾಗಿಯೇ ಅವುಗಳಿಗೆ ಅಪಘಾತಗಳೆಂದು ಹೆಸರು. ಬದುಕಿನಲ್ಲಿಯೂ ಅಪಘಾತಗಳು ಸಂಭವಿಸುತ್ತವೆಯಲ್ಲವೇ? ಹುಟ್ಟಿದವನಿಗೆ ಮರಣ ಸಹಜವೆಂಬ ಹೇಳಿಕೆಯಂತೆ ರಸ್ತೆಯೆಂದರೆ ಅಪಘಾತಗಳಿರುತ್ತವೆ ಎಂದು ಹೇಳಲಾಗುತ್ತದೆ. ಆದರೆ ರಸ್ತೆಗಳಿರುವುದೇ ಅಪಘಾತಗಳಿಗೆ ಎಂದಾದರೆ ಹೇಗೆ? ಅಪಘಾತಗಳು ಎಲ್ಲ ಕಾಲದಲ್ಲೂ ಸಂಭವಿಸುತ್ತಿದ್ದವು. ಆದರೆ ಈ ಆತಂಕವನ್ನು ವರ್ತಮಾನದ ಜಗತ್ತು ಎಂದಿಗಿಂತ ಹೆಚ್ಚಾಗಿ, ಗಂಭೀರವಾಗಿ ಎದುರಿಸಬೇಕಾಗಿದೆ. ಆಧುನಿಕ ಜಗತ್ತು ಮತ್ತದರ ಪ್ರಕಟಿತ ಲಕ್ಷಣಗಳಾದ ವೈಜ್ಞಾನಿಕ ಹಾಗೂ ತಾಂತ್ರಿಕ ಅನ್ವೇಷಣೆಗಳು, ಸಂಶೋಧನೆಗಳು ಮತ್ತು ಸಾಹಸಮಯ ಪ್ರವೃತ್ತಿಗಳು ಎಲ್ಲದಕ್ಕಿಂತ ಹೆಚ್ಚಾಗಿ ಬದುಕಿನ ಮೂರ್ತ ಮತ್ತು ಅಮೂರ್ತ ಅಂಶಗಳ ವೇಗವನ್ನು ಹೆಚ್ಚಿಸಿವೆ. ವರ್ಷಕ್ಕಿರುವ 365-366 ದಿನಗಳು, ದಿನಕ್ಕಿರುವ 24 ಗಂಟೆಗಳು, ಗಂಟೆಗಿರುವ 60 ನಿಮಿಷಗಳು, ಮತ್ತು ನಿಮಿಷಕ್ಕಿರುವ 60 ಸೆಕೆಂಡುಗಳು ಯಾವುದಕ್ಕೂ ಸಾಲದೆಂಬಂತಾಗಿದೆ. ಎಷ್ಟೇ ವೇಗದಲ್ಲಿ ಬದುಕು ಸಾಗಿದರೂ ಇನ್ನೂ ವೇಗವಾಗಿದ್ದರೆ ಒಳ್ಳೆಯದಿತ್ತು ಎಂಬ ಮನೋಭಾವ, ಜಾಯಮಾನ ಸಾಂಕ್ರಾಮಿಕವಾಗಿ ಬೆಳೆದಿದೆ. ಇದಕ್ಕನುಗುಣವಾಗಿ ಇನ್ನಷ್ಟು ಹೊಸ ಸಾಧನಗಳು ಹುಟ್ಟುತ್ತಿವೆ. ಈ ಬೆಳವಣಿಗೆಯಲ್ಲಿ ವಾಹನಗಳ ಪಾತ್ರ ದೊಡ್ಡದು.

ಹಿಂದೆಲ್ಲ ವಾಹನಗಳ ಸಂಖ್ಯೆ ಕಡಿಮೆಯಿತ್ತು. ವಾಹನ ಹೊಂದಿದವರು ಪ್ರತಿಷ್ಠಿತರಾಗಿದ್ದರು. ರಸ್ತೆಗಳೂ ಕಡಿಮೆಯೇ ಇದ್ದವು. ಸಂಪರ್ಕ ಸಾಧನಗಳಾಗಿ ರೈಲು ಹೆಚ್ಚು ಪ್ರಮುಖವಾಗಿತ್ತು. ವಾಹನಗಳಲ್ಲದೆ ಗಾಡಿ, ಟಾಂಗಾ, ಸೈಕಲ್ ಇಂತಹವು ಹೆಚ್ಚಿದ್ದುದರಿಂದ ವೇಗವೆನ್ನುವುದು ಅಪರೂಪದ ಮಾತಾಗಿತ್ತು. ವಾಹನಗಳಿಗೆ ಅತೀ ವೇಗವೆಂಬುದೇ ಇರಲಿಲ್ಲ. 40-50 ಕಿಲೊಮೀಟರ್ ಎನ್ನುವುದು ಭಾರಿ ವೇಗವೆಂದು ಪ್ರಸಿದ್ಧಿಯಾದ ಕಾಲವೊಂದಿತ್ತು. ವೇಗಕ್ಕೆ ಯಂತ್ರದಲ್ಲಿ ಅವಕಾಶವಿದ್ದರೂ ರಸ್ತೆಗಳಲ್ಲಿ ಅದಕ್ಕೆ ಸರಿಯಾಗಿ ವೇಗವರ್ಧನೆ ಸಾಧ್ಯವಿರಲಿಲ್ಲ. ನಮ್ಮ ರಸ್ತೆಗಳು ವೇಗ ನಿಯಂತ್ರಕಗಳಂತೆ ವರ್ತಿಸುತ್ತಿದ್ದವು.

ಕಳೆದ ಎರಡು ದಶಕಗಳಲ್ಲಿ ನಡೆದ ಮೋಟಾರು ವಾಹನಗಳ ಕ್ರಾಂತಿ ಗಾಬರಿ ಹುಟ್ಟಿಸುತ್ತದೆ. ಸಾರ್ವಜನಿಕ ಉದ್ದಿಮೆಯಾದ ಮಾರುತಿ ಕಾರು ತಯಾರಿಕಾ ಸಂಸ್ಥೆಯ ಉಗಮದ ನಂತರ ಎಲ್ಲ ಬಗೆಯ ವಾಹನಗಳು ತಯಾರಾದವು. ಜೊತೆಗೆ ಭಾರೀ ವಾಹನಗಳೂ ವೇಗವರ್ಧನೆಯ ತಾಂತ್ರಿಕ ನೈಪುಣ್ಯತೆಯನ್ನು ಗಳಿಸಿದವು. ವಾಹನಗಳ ಆಮದು ಜಾಸ್ತಿಯಾಯಿತು. ಸಾರಿಗೆಗೂ ವೇಗದೂತ, ವೋಲ್ವೋ ಮುಂತಾದ ವಿವಿಧ ರೀತಿಯ ವಾಹನಗಳು ಬಳಸಲ್ಪಟ್ಟು ಕಾರುಗಳನ್ನು ಹಿಂದಿಕ್ಕುವ ಲಾರಿ ಬಸ್ಸುಗಳನ್ನು ಕಾಣಬಹುದು. ಈ ವೇಗವರ್ಧನೆಯೊಂದಿಗೆ ದ್ವಿಚಕ್ರವಾಹನಗಳೂ ಹೆಜ್ಜೆ ಹಾಕಿದವು. ಇವು ಎಷ್ಟು ಆಕರ್ಷಕವಾದುವೆಂದರೆ ವೇಗವೇ ನಾಯಕತನಕ್ಕೆ ಅರ್ಹವೆಂಬಂತೆ ನಮ್ಮ ಸಿನೆಮಾಗಳು ತೋರಿಸಿದವು. ಇಂದು ಎಷ್ಟೊಂದು ಬಗೆಯ ದ್ವಿಚಕ್ರವಾಹನಗಳಿವೆಯೆಂದರೆ ಒಂದೊಂದೂ ಲಕ್ಷಾನುಗಟ್ಟಲೆ ಮಾರುಕಟ್ಟೆ ಬೆಲೆಯನ್ನು ಹೊಂದಿವೆ ಮತ್ತು ಒಂದು ಕಾರಿನ ಬೆಲೆಗೆ ಒಂದು ಮೋಟಾರು ಸೈಕಲ್ ಸಿಗುವುದೂ ದುರ್ಲಭವೆನಿಸಿದೆ.

ಈ ವೇಗಕ್ಕನುಗುಣವಾಗಿ ರಸ್ತೆಯನ್ನು ಸಪಾಟಾಗಿಸಲು ಹೆಚ್ಚು ಮಹತ್ವವನ್ನು ನೀಡಲಾಯಿತು. ಸರ್ಕಸ್‌ನ ಮೃತ್ಯುಪಂಜರದಲ್ಲಿ ತೋರಿಸುವ ವೇಗವನ್ನು ರಸ್ತೆಗಳಲ್ಲಿ ತೋರಿಸುವ ಹುಮ್ಮಸ್ಸು ವಿಸ್ತರಿಸಿ ರಸ್ತೆಗಳೂ ಮೃತ್ಯುಪಂಜರವಾದವು. ‘ಹೇಮಮಾಲಿನಿಯ ಕೆನ್ನೆಗಳಂತೆ’ ಎಂಬ ಉಪಮೆ ರಸ್ತೆಗೂ ಲಭ್ಯವಾಯಿತು!

ಅವಸರವೇ ಅಪಘಾತಕ್ಕೆ ಕಾರಣವೆಂಬ ಫಲಕ ಎಲ್ಲ ಕಡೆ ಕಾಣುತ್ತದೆ. ಅಪಘಾತವನ್ನು ನಿಯಂತ್ರಿಸಲು ಬಹಳಷ್ಟು ಬಗೆಯ ಸೂತ್ರಗಳನ್ನು ಪ್ರಚಾರಮಾಡಲಾಗುತ್ತಿದೆ. ಆದರೆ ಅಪಘಾತವನ್ನು ತಡೆಯಲು ಬೇಕಾದ ವೇಗನಿಯಂತ್ರಕಗಳನ್ನು ಅಳವಡಿಸಲು, ಹೋಗಲಿ ಅವರವರ ಪ್ರಾಣವುಳಿಯಬೇಕಾದರೆ ಧರಿಸಬೇಕಾದ ಶಿರಸ್ತ್ರಾಣಗಳನ್ನು ಧರಿಸಲೂ ವಾಹನ ಚಾಲಕರು ಸಿದ್ಧರಿಲ್ಲ.

ಅಪಘಾತಗಳಿಗೆ ವೇಗ ಮಾತ್ರ ಕಾರಣವಲ್ಲ. ಇತರ ಅನೇಕ ಅಂಶಗಳೂ ಕಾರಣ. ಅಜಾಗರೂಕತೆಯೆಂಬ ಹೊಣೆಗೇಡಿತನವೇ ಬಹಳಷ್ಟು ಅಪಘಾತಗಳಿಗೆ ಕಾರಣವಾಗಿದೆ. ನಮ್ಮ ಸುಖಕ್ಕೆ ಇನ್ನೊಬ್ಬರನ್ನು ಬಲಿಯಾಗಿಸುವ ಕ್ರೂರ ಪ್ರವೃತ್ತಿ ಮನುಷ್ಯಸಹಜವಾದದ್ದು. ಇನ್ನೊಬ್ಬರನ್ನು ಮೀರಿಸಲು ಏನು ಬೇಕಾದರೂ ಮಾಡುವ ಸ್ವಾರ್ಥಪರ ಮನೋಭೂಮಿಕೆಯೂ ರಸ್ತೆಗಳಲ್ಲಿ ಹೆಚ್ಚು ಪ್ರಖರವಾಗಿ ಪ್ರಕಟವಾಗುತ್ತಿದ್ದು ಅಪಘಾತಗಳನ್ನು ಸೃಷ್ಟಿಸುತ್ತಿವೆ. ಚಾಲಕರನ್ನು ಪ್ರೋತ್ಸಾಹಿಸಿಸುವ, ಉದ್ರೇಕಿಸುವ ಸಹಪ್ರಯಾಣಿಕರಿದ್ದರಂತೂ ರಸ್ತೆಯಲ್ಲಿ ವಾಹನ ಚಾಲನೆಯೆಂಬುದು ಮೃತ್ಯುದರ್ಶನವೇ ಸರಿ. ಇನ್ನೊಂದೆಡೆ ನಾವೆಷ್ಟೇ ಸರಿಯಾಗಿ ವಾಹನ ಚಾಲನೆ ಮಾಡಿದರೂ ಇನ್ನೊಬ್ಬ ವಾಹನ ಚಾಲಕ ತಪ್ಪುಮಾಡಿದರೆ ನಮ್ಮ ಸರಿಯಾದ ನಡೆ ವ್ಯರ್ಥವಾಗುತ್ತದೆ.

 ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಬಹಳಷ್ಟು ಮಂದಿಗೆ ಸಹಜ ಪ್ರಕ್ರಿಯೆ. ಜೊತೆಗೆ ಕೈಯ್ಯಲ್ಲಿ ಸಿಗರೇಟು (ಈಗ ಮೊಬೈಲು!) ಹಿಡಿದು ಚಾಲನೆ ಮಾಡುವುದು ಒಂದು ಶೋಕಿ. ಬಸ್ಸು, ಲಾರಿಗಳಲ್ಲಿ ಪಕ್ಕದಲ್ಲಿ ಕುಳಿತು ಚಾಲಕನೊಂದಿಗೆ ಮಾತನಾಡುತ್ತಾ ಆತನ ಏಕಾಗ್ರತೆಯನ್ನು ಬಾಧಿಸುವ ಪ್ರಯಾಣಿಕರು ಮಾತ್ರವಲ್ಲ, ನಿರ್ವಾಹಕರೂ ಇದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮತ್ತು ಮಹಾನಗರದ ರಸ್ತೆಗಳಲ್ಲಿ ಎಂಥವರ ದೃಷ್ಟಿಯನ್ನೂ ಒಮ್ಮೆಯಾದರೂ ಸೆಳೆಯಬಲ್ಲ ಆಕರ್ಷಕ ಮತ್ತು ಕೆಲವೊಮ್ಮ ರೋಚಕ ಮತ್ತು ಇನ್ನು ಕೆಲವೊಮ್ಮೆ ಉನ್ಮಾದಕರವಾದ ಜಾಹೀರಾತುಗಳಿರುತ್ತವೆ. ಮಾರುಕಟ್ಟೆ ನಮ್ಮನ್ನೆಷ್ಟು ಬಾಗಿಸಿದೆಯೆಂದರೆ ಎಲ್ಲದರಲ್ಲೂ ರಂಜನೆಯನ್ನು ನೀಡಲಾಗುತ್ತದೆ. ಆದ್ದರಿಂದ ರಸ್ತೆಗಳು ಬರಿಯ ಪ್ರಯಾಣಕ್ಕೆ ಮಾತ್ರವಲ್ಲ ಬಿನ್ನಾಣದ ದೃಷ್ಟಿಗೂ ಸಲ್ಲಬೇಕಾಗಿದೆ.

ನಮ್ಮ ರಸ್ತೆಗಳ ಪರಿಸ್ಥಿತಿ ಅಪಘಾತಗಳಿಗೆ ಕಾರಣವಾಗಬಹುದೆಂಬ ನಂಬಿಕೆಯೇ ನಮಗಿಲ್ಲ. ಅವೈಜ್ಞಾನಿಕವಾಗಿ ನಿರ್ಮಿಸುವುದರಿಂದ ಮತ್ತು ಅಗತ್ಯ ಗುಣಮಟ್ಟವನ್ನು ಹೊಂದದಿರುವುದರಿಂದ ಅವು ಅಪಘಾತಗಳಿಗೆ ಪರೋಕ್ಷ ಮತ್ತು ಕೆಲವೊಮ್ಮೆ ಪ್ರತ್ಯಕ್ಷ ಕಾರಣಗಳಾಗಿವೆ. ತಿರುವುಗಳನ್ನು, ರಸ್ತೆಯ ಅಂಚುಗಳನ್ನು, ಉಬ್ಬುಗಳನ್ನು ರಚಿಸುವಾಗ ದೂರದೃಷ್ಟಿಯಿದೆಯೆಂದು ಅನ್ನಿಸುವುದಿಲ್ಲ. ಅವನ್ನು ಆಗಾಗ ವಿನಾ ಕಾರಣ ದುರಸ್ತಿ ಮಾಡಲಾಗುತ್ತದೆ. ಕಾಂಕ್ರಿಟ್ ರಸ್ತೆಗಳ ಎರಡೂ ಪಕ್ಕಗಳಲ್ಲಿ ಆರೆಂಟು ಇಂಚು ಆಳವಿರುವುದರಿಂದ ವಾಹನಗಳು ಬದಿಗೆ ಸರಿಯುವಂತೆಯೇ ಇಲ್ಲ. ರಸ್ತೆ ತೆರಿಗೆ ಸಂಗ್ರಹಿಸುವ ಸರಕಾರ ಉತ್ತಮ ಗುಣಮಟ್ಟದ ಸುರಕ್ಷಿತ ರಸ್ತೆಗಳನ್ನು ಕೊಡಬೇಕೆಂಬ ಕನಿಷ್ಠ ಸೌಜನ್ಯ ಮತ್ತು ನಾಗರಿಕ ಪ್ರಜ್ಞೆಯನ್ನು ಹೊಂದಿಲ್ಲದಿರುವುದು ವಿಪರ್ಯಾಸ. ಹಿಂದೆ ಇದ್ದ ಉಬ್ಬುಗಳನ್ನು ತೆಗೆದು ಈಗ ಬೇಕಾದಾಗ ಇಡಬಲ್ಲ ತಡೆಬೇಲಿಗಳನ್ನು ಹಾಕಲಾಗುತ್ತಿದೆ. ಇವು ರಸ್ತೆಯ ಅಗಲವನ್ನು ಕಡಿಮೆ ಮಾಡುತ್ತವೆ ಮತ್ತು ವೇಗವಾಗಿ ಬರುವ ವಾಹನಗಳ ಭರಾಟೆಗೆ ಸಿಕ್ಕಿ ಜಖಂಗೊಳ್ಳುವುದೂ ಉಂಟು. ಇನ್ನು ರಸ್ತೆ ಅಡ್ಡ ದಾಟಲು ಬಹಳ ಕಡೆ ಸರಿಯಾದ ವ್ಯವಸ್ಥೆಯೇ ಇಲ್ಲ. ಈ ಎಲ್ಲ ಪೂರಕ ಅಂಶಗಳ ವೈಜ್ಞಾನಿಕ ಮುನ್ನೋಟದ ಅಗತ್ಯವಿದೆ.

ಎಲ್ಲದಕ್ಕಿಂತ ಮುಖ್ಯವಾಗಿ ರಸ್ತೆಯಲ್ಲಿ ವಾಹನ ಚಾಲನೆ ಮಾಡುವ ಎರಡು ಕಾಲುಗಳ ಪ್ರಾಣಿಗಳು: ವಾಹನ ಚಾಲನೆಯ ಪರವಾನಗಿ. ರಹದಾರಿ ಅತೀ ಸುಲಭವಾಗಿ ದೊರಕುತ್ತದೆ. ಭ್ರಷ್ಟ ಭಾರತದಲ್ಲಿ ಯಾವುದನ್ನೂ ಪಡೆಯುವುದು ಕಷ್ಟವಲ್ಲ. ಆದರೆ ಅದರ ಪರಿಣಾಮದ ಬಗ್ಗೆ ಯಾರೂ ಯೋಚಿಸಿದಂತಿಲ್ಲ.

ಇನ್ನು ವಾಹನಗಳ ಅರ್ಹತೆಯನ್ನು ಯಾರೂ ಗಮನಿಸುವುದೇ ಇಲ್ಲ. ಹಣ ಕೊಟ್ಟರೆ ವಾಹನ ಸಿಗುವುದು ಮಾತ್ರವಲ್ಲ, ಅದು ಹೇಗೇ ಇರಲಿ, ಅದರ ಗುಣಮಟ್ಟವನ್ನು ಸರಿಯಿದೆಯೆಂದು ದೃಢೀಕರಿಸಬಹುದು. ವಾಹನಗಳು ಸಾಕಷ್ಟು ವಾಯು ಮಾಲಿನ್ಯವನ್ನು ಸೃಷ್ಟಿಸುತ್ತವೆ. ಇವನ್ನು ನಿಯಂತ್ರಿಸಲು ಸರಕಾರಿ ಮತ್ತಿತರ ಸಂಸ್ಥೆಗಳಿದ್ದರೂ ಅಲ್ಲೂ ಭ್ರಷ್ಟಾಚಾರದಿಂದಾಗಿ ನಿಯಂತ್ರಣವಿಲ್ಲದೆ ವಾಹನಗಳು ಹೊಗೆಯುಗುಳಿಕೊಂಡು ಸಂಚರಿಸುತ್ತವೆ.

ರಸ್ತೆಗಳಲ್ಲಿ ಅಪಘಾತವಾಗುವ ಇನ್ನೊಂದು ಕಾರಣವೆಂದರೆ ಅಶಿಸ್ತು. ಹೇಗೆ ವಾಹನ ಚಾಲನೆ ಮಾಡಬೇಕೆಂದು ಅನೇಕರಿಗೆ ಗೊತ್ತಿಲ್ಲ. ಎಡ-ಬಲದ ಪರಿವೆಯಿಲ್ಲದೆ ಮುನ್ನುಗ್ಗುವುದು ಭಾರತೀಯ ಜಾಯಮಾನ. ಮತ್ತು ತಾನೇ ಸರಿ; ಇನ್ನೊಬ್ಬರು ಸದಾ ತಪ್ಪಿತಸ್ಥರು ಎಂಬ ಮನೋಭಾವ. ತನ್ನದೂ ತಪ್ಪಿರಬಹುದೆಂದು ಯೋಚಿಸಿದವನಿಗೆ ರಸ್ತೆ ರಕ್ಷಣೆಯನ್ನು ನೀಡುತ್ತದೆ.

ಈ ರೀತಿಯಲ್ಲಿ ವಾಹನ ಸರಿಯಿಲ್ಲದೆ ಅಥವಾ ವಾಹನ ಚಾಲಕನಿಗೆ ಸರಿಯಾದ ಕೌಶಲ್ಯವಿಲ್ಲದಾಗ ಅಪಘಾತವಲ್ಲದೆ ಇನ್ನೇನು ನಡೆದೀತು? ದುರದೃಷ್ಟವಶಾತ್ ನಾವು ಅಪಘಾತಗಳ ಬಗ್ಗೆ ಮಾತನಾಡುವಾಗ ಎಲ್ಲಾ ಆಂಶಗಳನ್ನು ಪರಿಗಣಿಸದೆ ನಮಗಾಗದವರನ್ನು ಮಾತ್ರ ದೂಷಿಸುತ್ತೇವೆ.

ರಸ್ತೆಯಲ್ಲೊಬ್ಬ ಯದ್ವಾ ತದ್ವಾ ವಾಹನ ಚಾಲನೆ ಮಾಡುತ್ತಾನೆಂದುಕೊಳ್ಳಿ: ನೀವೇನಾದರೂ ಆತನಿಗೆ ಒಳ್ಳೆಯದನ್ನು ಹೇಳಿದರೆ ಆತ ತಕ್ಷಣ ನನಗಾಗಿ ಅಳುವವರು ನನ್ನ ಮನೆಯಲ್ಲಿದ್ದಾರೆ; ನೀವು ತೆಪ್ಪಗಿರಿ ಎನ್ನುತ್ತಾರೆ. ಯಾರಾದರೂ ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಾರೆಂದು ಪೋಲೀಸರಿಗೆ ದೂರು ನೀಡಿದರೆ ಮೊದಲು ಆತ ದೂಷಿಸುವುದು ನಿಮ್ಮನ್ನೇ. ಕಾನೂನಿರುವುದೇ ಉಲ್ಲಂಘನೆಗಾಗಿ ಎಂಬ ನಂಬಿಕೆಯು ದೃಢವಾಗುತ್ತಿದೆ.

ಇಂತಹ ನೂರೆಂಟು ಉದಾಹರಣೆಗಳನ್ನು, ನಿದರ್ಶನಗಳನ್ನು ನೀಡಬಹುದು. ಆದರೆ ಅವ್ಯಾವುದೂ ಪರಿಣಾಮಕಾರಿಯಾಗುತ್ತಿಲ್ಲ ಎಂಬುದು ಹೆಚ್ಚುತ್ತಿರುವ ಅಪಘಾತಗಳಿಂದ ಗೊತ್ತಾಗುತ್ತದೆ. ಬದುಕು ಇಷ್ಟೊಂದು ಸಾಹಸಮಯವಾಗಿರಬಾರದು ಎಂದು ಕೆಲವೊಮ್ಮೆಯಾದರೂ ಅನ್ನಿಸದಿದ್ದರೆ ಬದುಕು ಹಸನಾಗಲಾರದು.

ಮುಖ್ಯವಾಗಿ ವಿವೇಕ ಬೇಕು; ವಿದ್ಯೆಯಲ್ಲ. ಕಲಿತವರೆಲ್ಲ ಸರಿಯಿರುತ್ತಾರೆ ಎಂಬ ಭ್ರಮೆಯು ಕ್ಷೀಣವಾಗಿದೆ. ಅಪಘಾತಗಳಲ್ಲಿ ಸರಿ-ತಪ್ಪುಗಳ ಪಾತ್ರ, ವ್ಯಸನಗಳ, ರಸ್ತೆಗಳ, ಕಾನೂನು ಅನುಷ್ಠಾನಗಳ ಪಾತ್ರ ಬಹಳ ದೊಡ್ಡದಿದೆ. ಇವೆಲ್ಲ ಸರಿಯಾಗಬೇಕೆಂದು ಆಸೆಪಡಬಹುದು. ಅದು ಈಡೇರುವ ವರೆಗೆ ಈಗಿರುವ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಬೇಕು. ಪರ್ಯಾಯ ವ್ಯವಸ್ಥೆ ಸದ್ಯಕ್ಕೆ ಕಾಣಸಿಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News