ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ದಾಸ್ ವಿರುದ್ಧ ಈಗ ಸ್ವಾಮಿ ದಾಳಿ

Update: 2016-06-23 18:27 GMT

ಹೊಸದಿಲ್ಲಿ,ಜೂ.23: ಆರ್‌ಬಿಐ ಗವರ್ನರ್ ರಘುರಾಮ ರಾಜನ್,ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಬಳಿಕ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರ ದಾಳಿಯ ಮುಂದಿನ ಗುರಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಆಗಿರುವಂತಿದೆ. ಸ್ವಾಮಿಯವರ ನಡೆಯಿಂದ ತಕ್ಷಣ ಚುರುಕಾಗಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಚೀನಾದಿಂದಲೇ ಪ್ರತಿಕ್ರಿಯಿಸಿ, ಇದು ವಿತ್ತ ಸಚಿವಾಲಯದಲ್ಲಿನ ಶಿಸ್ತುಬದ್ಧ ಸರಕಾರಿ ನೌಕರನ ವಿರುದ್ಧ ಅನ್ಯಾಯದ, ಸುಳ್ಳಿನ ದಾಳಿಯಾಗಿದೆ ಎಂದು ಬಣ್ಣಿಸಿದ್ದಾರೆ.

‘‘ಮಹಾಬಲಿಪುರಂನಲ್ಲಿಯ ಆಯಕಟ್ಟಿನ ಜಾಗಗಳನ್ನು ಕಬಳಿಸುವಲ್ಲಿ ‘ಪಿಸಿ’ಗೆ ನೆರವಾಗಿದ್ದಕ್ಕಾಗಿ ದಾಸ್ ವಿರುದ್ಧ ಆಸ್ತಿ ವ್ಯವಹಾರ ಪ್ರಕರಣವೊಂದು ಬಾಕಿ ಉಳಿದಿದೆ ಎಂದು ನಾನು ಭಾವಿಸಿದ್ದೇನೆ ’’ಎಂದು ಸ್ವಾಮಿ ಗುರುವಾರ ಟ್ವೀಟಿಸಿದ್ದಾರೆ.

ಆರ್‌ಬಿಐ ಡೆಪ್ಯೂಟಿ ಗವರ್ನರ್ ಊರ್ಜಿತ್ ಪಟೇಲ್ ಮತ್ತು ದಾಸ್ ಅವರನ್ನು ಆರ್‌ಬಿಐ ಗವರ್ನರ್ ಹುದ್ದೆಗೆ ಸಂಭಾವ್ಯರ ಪಟ್ಟಿಯಿಂದ ಹೊರಗಿರಿಸಬೇಕು ಮತ್ತು ದಾಸ್ ಅವರನ್ನು ತಮಿಳುನಾಡು ಮಾತೃ ಕೇಡರ್‌ಗೆ ವಾಪಸ್ ಕಳುಹಿಸಬೇಕು ಎಂದು ಬಯಸಿರುವ ತನ್ನ ಟ್ವಿಟರ್ ಅಭಿಮಾನಿಗಳಿಗೆ ಉತ್ತರವಾಗಿ ಸ್ವಾಮಿ ಈ ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಿಗೇ ಚೀನಾ ಪ್ರವಾಸದಲ್ಲಿರುವ ಜೇಟ್ಲಿ ತನ್ನ ಪ್ರತಿಕ್ರಿಯೆಯನ್ನು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News