ಸರಕಾರದ ಸಮೀಕ್ಷೆಯಲ್ಲೇ ಸ್ಮೃತಿ, ಜೇಟ್ಲಿ ಸಾಧನೆ ಅತ್ಯಂತ ಕಳಪೆ

Update: 2016-06-24 10:52 GMT

ಹೊಸದಿಲ್ಲಿ, ಜೂ. 24 : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎರಡು ವರ್ಷ ಪೂರ್ತಿಗೊಳಿಸಿರುವ ಸಂದರ್ಭದಲ್ಲಿ ಮೈ ಗೊವ್ (MyGov ) ವೆಬ್ ಸೈಟ್ ನಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿದೆ. ಗುರುವಾರ ಈ ಸಮೀಕ್ಷೆ ಪೂರ್ಣಗೊಂಡಿದೆ. ಇದರಲ್ಲಿ ಸರಕಾರದ ವಿದೇಶಾಂಗ ನೀತಿಗೆ ಅತಿ ಹೆಚ್ಚು ಪ್ರಶಂಸೆ ಸಿಕ್ಕಿದೆ. ಸಮೀಕ್ಷೆಯಲ್ಲಿ ಒಂದರಿಂದ ಐದು ಸ್ಟಾರ್ ನೀಡಲು ಕೇಳಲಾಗಿದೆ. ಐದು ಸ್ಟಾರ್ ಅಂದರೆ ಅತ್ಯುತ್ತಮ , ಒಂದು ಸ್ಟಾರ್ ಅಂದರೆ ಅತ್ಯಂತ ಕಳಪೆ. 

ರೈಲ್ವೆ ಇಲಾಖೆಗೂ ಜನರಿಂದ ಪ್ರಥಮ ದರ್ಜೆ ಸಿಕ್ಕಿದೆ. 67 ಮಂದಿ ಈ ಇಲಾಖೆಗೆ ಐದು ಸ್ಟಾರ್ ನೀಡಿದ್ದಾರೆ. ಆದರೆ ಸ್ಮೃತಿ ಇರಾನಿಯ ಮಾನವ ಸಂಪನ್ಮೂಲ ಇಲಾಖೆ ತಿಣುಕಾಡಿ ಪಾಸ್ ಮಾರ್ಕ್ ಪಡೆದಿದೆ. ಕೇವಲ 35% ಜನ ಅವರಿಗೆ ಐದು ಸ್ಟಾರ್ ನೀಡಿದ್ದಾರೆ. ಕಪ್ಪು ಹಣ ವಾಪಸ್ ವಿಷಯದಲ್ಲೂ ಜನರಿಗೆ ಕೇಂದ್ರ ಸರಕಾರದ ಕೆಲಸ ತೃಪ್ತಿ ನೀಡಿಲ್ಲ. ಇದಕ್ಕೆ ಜನರಿಂದ ಭಾರೀ ಟೀಕೆ ವ್ಯಕ್ತವಾಗಿದೆ. ಕೇವಲ 31% ಜನ ಇದಕ್ಕೆ ಐದು ಸ್ಟಾರ್ ನೀಡಿದ್ದಾರೆ. ಸ್ವಚ್ಛ ಭಾರತ್ ಯೋಜನೆಯ ಬಗ್ಗೆಯೂ ಜನರಿಗೆ ಸಮಾಧಾನ ಇಲ್ಲ ಎಂದು ಇದರಿಂದ ತಿಳಿದು ಬಂದಿದೆ. ಕೇವಲ 33% ಮಂದಿ ಇದಕ್ಕೆ ಐದು ಸ್ಟಾರ್ ನೀಡಿದ್ದಾರೆ. 

2,68,796 ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಇದರ ಫಲಿತಾಂಶವನ್ನು ಮುಂದಿನ ಸಂಪುಟ ಪುನಾರಚನೆ ಸಂದರ್ಭದಲ್ಲಿ ಮಾನದಂಡವಾಗಿ ಬಳಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News