ಶುಲ್ಕ ಏರಿಕೆಯಾಗಿದ್ದರೂ ಎಚ್-1ಬಿ ವೀಸಾ ಪಡೆಯುವಲ್ಲಿ ಭಾರತವೇ ಮುಂದು

Update: 2016-06-24 13:26 GMT

ಹೈದರಾಬಾದ್,ಜೂ.24: ಶುಲ್ಕ ಏರಿಕೆಯ ಹೊರತಾಗಿಯೂ ಅಮೆರಿಕ ಸರಕಾರವು ವಿತರಿಸುತ್ತಿರುವ ಎಚ್-1ಬಿ ವೀಸಾಗಳಲ್ಲಿ ಭಾರತದ ಸಿಂಹಪಾಲು ಮುಂದುವರಿದಿದೆ ಎಂದು ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿರುವ ರಿಚರ್ಡ್ ವರ್ಮಾ ಶುಕ್ರವಾರ ತಿಳಿಸಿದರು.

ಇಲ್ಲಿ ಹವಾಮಾನ ಬದಲಾವಣೆ ಕುರಿತ ಸಮಾವೇಶದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಲ್ಕ ಏರಿಕೆಯ ನಂತರವೂ ಎಚ್-1ಬಿ ಮತ್ತು ಎಲ್1ವೀಸಾಗಳಲ್ಲಿ ಸಿಂಹಪಾಲನ್ನು ಭಾರತವು ಪಡೆದುಕೊಳ್ಳುತ್ತಿರುವುದು ಮುಂದುವರಿದಿದೆ. ಶೇ.70ರಷ್ಟು ಎಚ್-1ಬಿ ವೀಸಾಗಳನ್ನು ಭಾರತೀಯರೇ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಶುಲ್ಕ ಏರಿಕೆಯ ಬಗ್ಗೆ ಕಳವಳ ನಮಗೆ ಅರ್ಥವಾಗುತ್ತದೆ. ಈ ಬಗ್ಗೆ ಮಾತುಕತೆ ಪ್ರಗತಿಯಲ್ಲಿದೆ ಎಂದು ನಾನು ಭಾವಿಸಿದ್ದೇನೆ. ಇದು ಪ್ರವಾಸದ ಮತ್ತು ಅಮೆರಿಕದಲ್ಲಿ ವಾಣಿಜ್ಯ ಉದ್ಯಮದ ಮುಖ್ಯಭಾಗ ಎನ್ನುವುದೂ ನಮಗೆ ಗೊತ್ತು ಎಂದರು.

ಅಮೆರಿಕವು ತನ್ನ 9/11 ಆರೋಗ್ಯ ಮತ್ತು ಪರಿಹಾರ ಕಾಯ್ದೆಯಡಿ ಕೆಲವು ವರ್ಗಗಳ ಎಚ್-1ಬಿ ವೀಸಾಗಳ ಮೇಲೆ 4,000 ಡಾ. ಮತ್ತು ಎಲ್1 ವೀಸಾಗಳ ಮೇಲೆ 4,500 ಡಾ.ವಿಶೇಷ ಶುಲ್ಕವನ್ನು ವಿಧಿಸಿದೆ.

ಈ ಏರಿಕೆಯಿಂದಾಗಿ ಹೆಚ್ಚುಕಡಿಮೆ ಎಲ್ಲ ಭಾರತೀಯ ಐಟಿ ಕಂಪನಿಗಳು ಪ್ರತಿ ಎಚ್-1ಬಿ ವೀಸಾಕ್ಕಾಗಿ 8,000 ಡಾ.ಗಳಿಂದ 10,000 ಡಾ.ವರೆಗೆ ಶುಲ್ಕವನ್ನು ಪಾವತಿಸುತ್ತಿವೆ. ಇದರಿಂದ ಭಾರತೀಯ ತಂತ್ರಜ್ಞಾನ ಕ್ಷೇತ್ರವು ವಾರ್ಷಿಕ 400 ಮಿ.ಡಾ.ಗಳ ಹೊರೆಯನ್ನು ಭರಿಸಬೇಕಾಗುತ್ತದೆ ಎಂದು ನಾಸ್ಕಾಂ ನಿರೀಕ್ಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News