ತಪ್ಪೊಪ್ಪಿಗೆ ಹೇಳಿಕೆಯ ಪ್ರತಿಯನ್ನು ಪಡೆಯಲು ಆರೋಪಿಗೆ ಹಕ್ಕಿದೆ: ಮುಂಬೈ ಹೈಕೋರ್ಟ್

Update: 2016-06-24 18:38 GMT

ಮುಂಬೈ,ಜೂ.24: ಪ್ರಕರಣದಲ್ಲಿ ಸಹ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯ ಪ್ರತಿಯನ್ನು ಪಡೆಯಲು ಆರೋಪಿಗೆ ಹಕ್ಕು ಇದೆ ಎಂದು ಶುಕ್ರವಾರ ಅಭಿಪ್ರಾಯ ವ್ಯಕ್ತಪಡಿಸಿದ ಮುಂಬೈ ಉಚ್ಚ ನ್ಯಾಯಾಲಯವು, ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ ಸಂಜೀವ ಖನ್ನಾ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸಿಬಿಐಗೆ ನಿರ್ದೇಶ ನೀಡಿತು.

ತನ್ನ ಮಾಜಿ ಪತ್ನಿ ಇಂದ್ರಾಣಿ ಮುಖರ್ಜಿಯ ಪುತ್ರಿ ಶೀನಾಳ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಖನ್ನಾ ಇಂದ್ರಾಣಿಯ ಮಾಜಿ ಕಾರುಚಾಲಕ ಶ್ಯಾಮವರ ರಾಯ್‌ನ ತಪ್ಪೊಪ್ಪಿಗೆ ಹೇಳಿಕೆಯ ಪ್ರತಿಯನ್ನು ಕೋರಿದ್ದ. ರಾಯ್‌ಗೆ ಇತ್ತೀಚಿಗೆ ಕ್ಷಮಾದಾನ ನೀಡಲಾಗಿದ್ದು, ಪ್ರಕರಣದಲ್ಲಿ ಮಾಫಿ ಸಾಕ್ಷಿದಾರನಾಗಿ ಮಾಡಲಾಗಿದೆ.
ಪ್ರಕರಣದಲ್ಲಿ ಸಹ ಆರೋಪಿಗಳು ಅಥವಾ ಸಾಕ್ಷಿಗಳ ಹೇಳಿಕೆಗಳು ವಿಚಾರಣೆಯ ಸಂದರ್ಭ ಸಾಕ್ಷಗಳಾಗಿ ಬಳಕೆಯಾಗುವುದರಿಂದ ವಿಚಾರಣೆಯ ಆರಂಭಕ್ಕೆ ಮುನ್ನ ಅವುಗಳ ಪ್ರತಿಗಳನ್ನು ಪಡೆಯಲು ಆರೋಪಿಗಳಿಗೆ ಸ್ವಾಭಾವಿಕವಾಗಿಯೇ ಹಕ್ಕು ಇದೆ ಎಂದು ನ್ಯಾ.ಸಾಧನಾ ಜಾಧವ್ ಅಭಿಪ್ರಾಯಿಸಿದರು.
ಒಂದು ವಾರದೊಳಗೆ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದ ನ್ಯಾಯಾಲಯವು,ವಿಚಾರಣೆಯನ್ನು ಜೂ.30ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News