ಬಿಜೆಪಿ ಪಾಲಿಗೆ ತಲೆನೋವಾಗಿರುವ ಸುಬ್ರಮಣಿಯನ್ ಸ್ವಾಮಿ

Update: 2016-06-25 03:34 GMT

ಹೊಸದಿಲ್ಲಿ: ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಸುಬ್ರಮಣಿಯನ್ ಸ್ವಾಮಿ ಇದೀಗ ಪಕ್ಷಕ್ಕೇ ಸೆರಗಿನ ಕೆಂಡವಾಗಿ ಪರಿಣಮಿಸಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ದ ಪರೋಕ್ಷ ಟ್ವೀಟ್ ಸಮರ ಆರಂಭಿಸಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಸುಬ್ರಮಣಿಯನ್ ಸ್ವಾಮಿ ಶುಕ್ರವಾರ ಮಾಡಿರುವ "ಬ್ಲಡ್ಬಾತ್" (ಹತ್ಯಾಕಾಂಡ) ಎಂಬ ಪದ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಹೇಳಿಕೆಗೆ ಪ್ರತಿಕ್ರಿಯೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಎಲ್ಲೂ ಸ್ವಾಮಿ, ಜೇಟ್ಲಿ ಹೆಸರು ಉಲ್ಲೇಖಿಸಿಲ್ಲ.
"ಜನ ನನಗೆ ಶಿಸ್ತು ಮತ್ತು ಸ್ವಯಂನಿಯಂತ್ರಣ ಬಗ್ಗೆ ಅನಪೇಕ್ಷಿತ ಸಲಹೆ ನೀಡುತ್ತಿದ್ದಾರೆ. ಆದರೆ ನಾನು ಶಿಸ್ತಿನಿಂದ ನನ್ನ ಕರ್ತವ್ಯ ನಿಭಾಯಿಸಿದರೆ, ರಕ್ತಪಾತವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿಲ್ಲ" ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಅರುಣ್ ಜೇಟ್ಲಿ, ಭಾರತೀಯ ರಾಜಕಾರಣಿಗಳ ಶಿಸ್ತಿನ ಬಗ್ಗೆ ಉಲ್ಲೇಖಿಸಿ, "ಎಷ್ಟರ ಮಟ್ಟಿಗೆ ಅವರ ಮೇಲೆ ದಾಳಿ ಮಾಡಲು ಸಾಧ್ಯ? ಶಿಸ್ತು ಹಾಗೂ ಅಧಿಕಾರ ಅವರನ್ನು ಪ್ರತಿಕ್ರಿಯಿಸದಂತೆ ತಡೆಯುತ್ತದೆಯೇ? ಇದು ಒಂದಕ್ಕಿಂತ ಹೆಚ್ಚು ಬಾರಿ ಸಂಭವಿಸಿದೆ" ಎಂದು ಹೇಳಿದ್ದರು.

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಮಾಡಿದ ಟೀಕೆಗೆ ಪ್ರತಿಕ್ರಿಯೆಯಾಗಿ ಹಣಕಾಸು ಸಚಿವರು ಈ ಹೇಳಿಕೆ ನೀಡಿದ್ದರು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ವಿರುದ್ಧ ಸ್ವಾಮಿ ಮಾಡಿರುವ ಟೀಕೆಗೆ ಜೇಟ್ಲೆ ಖಾರವಾಗಿ ಪ್ರತಿಕ್ರಿಯಿಸಿದ್ದರು. "ಹಣಕಾಸು ಸಚಿವಾಲಯದ ಒಬ್ಬ ಶಿಸ್ತಿನ ಅಧಿಕಾರಿ ವಿರುದ್ಧ ಮಾಡಿರುವ ಸುಳ್ಳು ಆರೋಪ ನ್ಯಾಯಸಮ್ಮತವಲ್ಲ" ಎಂದು ಗುಡುಗಿದ್ದರು.

ಸ್ವಾಮಿ ಶುಕ್ರವಾರ ಮುಂಜಾನೆ, "ಎಲ್ಲ ಸಚಿವರು ಸಾಂಪ್ರದಾಯಿಕ ಹಾಗೂ ಆಧುನಿಕ ಭಾರತೀಯ ಉಡುಗೆಗಳನ್ನು ವಿದೇಶ ಪ್ರವಾಸದ ವೇಳೆ ತೊಡುವಂತೆ ಬಿಜೆಪಿ ಸೂಚಿಸಬೇಕು. ಟೈ ಹಾಗೂ ಕೋಟ್ ಧರಿಸುವುದು ವೆಯಿಟರ್ಗಳಂತೆ ಕಾಣುತ್ತದೆ" ಎಂದು ಟ್ವೀಟ್ ಮಾಡಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News