ಬಡಕುಟುಂಬದ ಮಗುವಿಗೆ ಪ್ರವೇಶ ನಿರಾಕರಿಸಿದ ಶಾಲೆ

Update: 2016-06-25 18:11 GMT

ಮುಂಬೈ,ಜೂ.25: ಮಗುವಿನ ವಿಧವೆ ತಾಯಿ ಒಂದೇ ಬಾರಿ ಪೂರ್ಣ ಶುಲ್ಕ ತುಂಬಲು ಅಸಮರ್ಥಳಾಗಿರುವುದರಿಂದ 10,500 ರೂ.ಗಳ ಶುಲ್ಕವನ್ನು ಕಂತುಗಳಲ್ಲಿ ಪಡೆದುಕೊಂಡು ಆ ಮಗುವಿಗೆ ಎಲ್‌ಕೆಜಿ ತರಗತಿಗೆ ಸೇರಿಸಿಕೊಳ್ಳುವ ಬಗ್ಗೆ ಪರಿಶೀಲಿಸುವಂತೆ ಉಪನಗರ ಚೆಂಬೂರಿನ ಶಾಲೆಯೊಂದಕ್ಕೆ ಸೂಚಿಸಿರುವ ಬಾಂಬೆ ಉಚ್ಚ ನ್ಯಾಯಾಲಯದ ನ್ಯಾ.ವಿ.ಎಂ.ಕಾನಡೆ ಅವರು, ಇಲ್ಲದಿದ್ದರೆ ಶುಲ್ಕವನ್ನು ತಾನೇ ಭರಿಸುವುದಾಗಿ ತಿಳಿಸಿದ್ದಾರೆ.

ರೀಟಾ ಕನೋಜಿಯಾ ಎಂಬ ಬಡವಿಧವೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ. ಮನೆ ಗೆಲಸದಾಳಾಗಿ ದುಡಿಯುತ್ತಿರುವ ರೀಟಾ ಚೆಂಬೂರು ತಿಲಕ ನಗರದಲ್ಲಿರುವ ಲೋಕ ಮಾನ್ಯ ತಿಲಕ್ ಪ್ರೌಢಶಾಲೆಗೆ ಸಮೀಪದ ಕೊಳಗೇರಿಯ ನಿವಾಸಿಯಾಗಿ ದ್ದಾಳೆ. ಲಾಂಡ್ರಿ ನಡೆಸುತ್ತಿದ್ದ ಆಕೆಯ ಪತಿ ಎರಡು ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ಬಲಿಯಾಗಿದ್ದಾನೆ. ಆಕೆಯ ಇಬ್ಬರು ಪುತ್ರಿಯರು ಇದೇ ಶಾಲೆಯಲ್ಲಿ ಮೂರು ಮತ್ತು ನಾಲ್ಕನೇ ತರಗತಿಗಳಲ್ಲಿ ಓದುತ್ತಿದ್ದಾರೆ. ಇದೀಗ ತನ್ನ ನಾಲ್ಕರ ಹರೆಯದ ಪುತ್ರ ಕಾರ್ತಿಕ್‌ನನ್ನೂ ಇದೇ ಶಾಲೆಗೆ ಸೇರಿಸಲು ಆಕೆ ಬಯಸಿದ್ದಾಳೆ.
ಹಿಂದಿನ ವಿಚಾರಣೆಯ ಸಂದರ್ಭ ಕಟ್ಟಡ ಅಭಿವೃದ್ಧಿ ನಿಧಿಗೆ 19,500 ರೂ.ಗಳ ಪಾವತಿಗೆ ಆಗ್ರಹಿಸದೆ ಮಗುವಿಗೆ ಪ್ರವೇಶ ನೀಡುವಂತೆ ನ್ಯಾಯಾಯವು ಶಾಲೆಯ ಅಧಿಕಾರಿಗಳಿಗೆ ತಿಳಿಸಿತ್ತು. ಬಳಿಕ ಶಾಲಾ ಶುಲ್ಕವಾಗಿ 10,500 ರೂ.ಗಳನ್ನು ಪಾವತಿಸುವಂತೆ ಅಧಿಕಾರಿಗಳು ರೀಟಾಗೆ ಸೂಚಿಸಿದ್ದರು. ಒಂದೇ ಬಾರಿಗೆ ಅಷ್ಟು ಹಣ ಕಟ್ಟಲು ಅಸಮರ್ಥಳಾಗಿರುವ ರೀಟಾ ಕಂತುಗಳಲ್ಲಿ ಪಾವತಿಗೆ ಅವಕಾಶ ಕೋರಿದ್ದಳಾದರೂ ಶಾಲೆಯು ನಿರಾಕರಿಸಿತ್ತು. ಅಷ್ಟೇ ಅಲ್ಲ,ಆಕೆಯನ್ನು ಒಳಕ್ಕೆ ಬಿಡದಂತೆ ಭದ್ರತಾ ಸಿಬ್ಬಂದಿಗೂ ಸೂಚಿಸಿತ್ತು.
ಶುಕ್ರವಾರ ವಿಚಾರಣೆ ಸಂದರ್ಭ ಮಗುವಿನ ಶುಲ್ಕವನ್ನು ತಾನೇ ಭರಿಸುವ ಕೊಡುಗೆಯನ್ನು ಶಾಲಾಧಿಕಾರಿಗಳ ಮುಂದಿಟ್ಟ ನ್ಯಾ.ಕಾನಡೆ ಅವರು, ಈ ಪ್ರಕರಣವನ್ನು ಸಹಾನುಭೂತಿಯಿಂದ ಪರಿಶೀಲಿಸಿ.ಮಗುವನ್ನು ಶಿಕ್ಷಣದಿಂದ ವಂಚಿತಗೊಳಿಸಬೇಡಿ ಎಂದು ಹೇಳಿದರು.
ಮುಂದಿನ ವಿಚಾರಣಾ ದಿನಾಂಕವಾದ ಜೂ.27ರೊಳಗೆ ಅರ್ಜಿಗೆ ಉತ್ತರಿಸುವಂತೆ ಪೀಠವು ಶಾಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News