ಶೂನ್ಯ ಅಪರಾಧ ಸ್ಥಾಪನೆ: ಸಂಸದೀಯ ಸಮಿತಿಯ ಕಳವಳ

Update: 2016-06-25 18:15 GMT

ಭೋಪಾಲ,ಜೂ.25: ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಅಪರಾಧ ಸ್ಥಾಪನೆಯಲ್ಲಿ ಶೂನ್ಯ ಸಾಧನೆಗಾಗಿ ಕಳವಳ ವ್ಯಕ್ತಪಡಿಸಿರುವ ಸಿಬ್ಬಂದಿ, ಸಾರ್ವಜನಿಕ ದೂರು,ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸಮಿತಿಯು, ಈ ವಿಷಯದಲ್ಲಿ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನದ ಅಗತ್ಯಕ್ಕೆ ಒತ್ತು ನೀಡಿದೆ.

ಕಳೆದ ಸಂಜೆ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಮಿತಿಯ ಅಧ್ಯಕ್ಷ ಡಾ.ಇ.ಎಂ.ಸುದರ್ಶನ ನಾಚಿಯಪ್ಪನ್ ಅವರು, 2013ರ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆಯ 2,40,215 ದೂರುಗಳು ಬಂದಿದ್ದು, ಈ ಪೈಕಿ 324 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೇ ರೀತಿ 2014ರ ಲೋಕಸಭಾ ಚುನಾವಣೆಗಳ ಸಂದರ್ಭ 1,49,940 ದೂರುಗಳು ಬಂದಿದ್ದು, 216 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆದರೆ ಇಂದಿನವರೆಗೆ ಒಂದೇ ಒಂದು ಪ್ರಕರಣದಲ್ಲಿ ದೋಷ ನಿರ್ಣಯವಾಗಿಲ್ಲ ಎಂದು ಹೇಳಿದರು.
ರಾಜ್ಯಮಟ್ಟದಲ್ಲಿ ಚುನಾವಣಾ ಆಯೋಗಕ್ಕೆ ಸಾಕಷ್ಟು ಬೆಂಬಲ ದೊರೆಯುತ್ತಿಲ್ಲವೆಂಬಂತೆ ಕಂಡುಬರುತ್ತಿದೆ. ಇಂತಹ ಸನ್ನಿವೇಶದಲ್ಲಿ ಆಯೋಗವು ಹಲ್ಲಿಲ್ಲದ ಕಾಗದದ ಹುಲಿಯಾಗುತ್ತದೆ ಎಂದ ಅವರು, ಈ ಬಗ್ಗೆ ವಿವರವಾಗಿ ಚರ್ಚಿಸಲು ಸಮಿತಿಯು ಶೀಘ್ರವೇ ಚುನಾವಣಾ ಆಯೋಗವನ್ನು ಭೇಟಿಯಾಗಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News