ಭಯೋತ್ಪಾದನೆ ಇರುವ ದೇಶಗಳ ಮುಸ್ಲಿಮರಿಗೆ ಮಾತ್ರ ಅಮೆರಿಕ ನಿಷೇಧ: ಟ್ರಂಪ್ ತಿಪ್ಪರಲಾಗ

Update: 2016-06-26 17:56 GMT

ಬ್ಯಾಲ್ಮಡೀ, ಜೂ. 26: ವಿದೇಶಿ ಮುಸ್ಲಿಮರ ನಿಷೇಧ ಪಸ್ತಾಪವನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಶನಿವಾರ ಪರಿಷ್ಕರಿಸಿದ್ದಾರೆ. ಭಾರೀ ಪ್ರಮಾಣದಲ್ಲಿ ಭಯೋತ್ಪಾದನೆಯಿರುವ ದೇಶಗಳ ಮುಸ್ಲಿಮರನ್ನು ಮಾತ್ರ ನಿಷೇಧಿಸಲು ಟ್ರಂಪ್ ಬಯಸಿದ್ದಾರೆ ಎಂದು ಟ್ರಂಪ್‌ರ ವಕ್ತಾರೆ ಹೋಪ್ ಹಿಕ್ಸ್ ಹೇಳಿದ್ದಾರೆ.
ತನ್ನ ಧಣಿ ಈ ನೂತನ ನಿಲುವನ್ನು ಎರಡು ವಾರಗಳ ಹಿಂದೆ ನೀಡಿದ ಧೋರಣಾ ಭಾಷಣದಲ್ಲಿ ತೆಗೆದುಕೊಂಡಿದ್ದಾರೆ ಎಂದು ಇಮೇಲ್‌ನಲ್ಲಿ ಹಿಕ್ಸ್ ತಿಳಿಸಿದರು. ವಿದೇಶಿ ಮುಸ್ಲಿಮರ ಅಮೆರಿಕ ಪ್ರಯಾಣಕ್ಕೆ ನಿಷೇಧ ವಿಧಿಸುವ ಪ್ರಸ್ತಾಪವನ್ನು ಟ್ರಂಪ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮುಂದಿಟ್ಟಿದ್ದರು. ಈಗ ನಿಲುವು ಪರಿಷ್ಕರಣೆಯೊಂದಿಗೆ ಅವರು ತನ್ನ ಮೂಲ ನಿಲುವಿನಿಂದ ಸಾಕಷ್ಟು ದೂರ ಸರಿದಂತಾಗಿದೆ.
ತನ್ನ ಆ ಭಾಷಣದಲ್ಲಿ ಟ್ರಂಪ್ ಮುಸ್ಲಿಮರನ್ನು ಉಲ್ಲೇಖಿಸಿಲ್ಲ. ಭಾರೀ ಪ್ರಮಾಣದಲ್ಲಿ ಭಯೋತ್ಪಾದನೆ ಇರುವ ಜಗತ್ತಿನ ಭಾಗಗಳಿಂದ ಬರುವ ಜನರ ಮೇಲೆ ತಾತ್ಕಾಲಿಕ ನಿಷೇಧ ಹೇರಬೇಕು ಎಂದಷ್ಟೆ ಹೇಳಿದ್ದರು.
ಟ್ರಂಪ್ ತನ್ನ ನಿಷೇಧ ವ್ಯಾಪ್ತಿಯನ್ನು ಹಿಗ್ಗಿಸುತ್ತಿದ್ದಾರೆ, ಕುಗ್ಗಿಸುತ್ತಿಲ್ಲ ಎಂಬುದಾಗಿ ಆ ಸಮಯದಲ್ಲಿ ಅರ್ಥ ಮಾಡಿಕೊಳ್ಳಲಾಗಿತ್ತು.
ಸ್ಕಾಟ್‌ಲ್ಯಾಂಡ್‌ನ ಪೂರ್ವ ಕರಾವಳಿಯಲ್ಲಿರುವ ಗಾಲ್ಫ್ ಕೋರ್ಸೊಂದಕ್ಕೆ ಶನಿವಾರ ಟ್ರಂಪ್ ನೀಡಿದ ಭೇಟಿಯ ವೇಳೆ ಈ ವಿಷಯ ಪ್ರಸ್ತಾಪವಾಯಿತು. ‘‘ಸ್ಕಾಟ್‌ಲ್ಯಾಂಡ್‌ನಿಂದ ಓರ್ವ ಮುಸ್ಲಿಮ್ ಅಮೆರಿಕಕ್ಕೆ ಬರಬಹುದೇ?’’ ಎಂಬುದಾಗಿ ಅವರೊಂದಿಗೆ ಇದ್ದ ಓರ್ವ ಪತ್ರಕರ್ತ ಈ ಸಂದರ್ಭದಲ್ಲಿ ಪ್ರಶ್ನಿಸಿದರು. ‘‘ಅದರಿಂದ ನನಗೇನೂ ಸಮಸ್ಯೆಯಿಲ್ಲ’’ ಎಂದು ಟ್ರಂಪ್ ಉತ್ತರಿಸಿದರು.
ಬಳಿಕ ಹಿಕ್ಸ ಇಮೇಲ್‌ನಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದರು. ಭಯೋತ್ಪಾದನೆ ತುಂಬಿರುವ ದೇಶಗಳಲ್ಲಿರುವ ಮುಸ್ಲಿಮರಿಗೆ ಮಾತ್ರ ಟ್ರಂಪ್ ನಿಷೇಧ ಅನ್ವಯವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News