ಅಖಿಲೇಶ್ ಯಾದವ್ ಸಂಪುಟ ವಿಸ್ತರಣೆ

Update: 2016-06-27 18:34 GMT

ಲಕ್ನೊ, ಜೂ.27: ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತನ್ನ ಸಚಿವ ಸಂಪುಟವನ್ನು ಸೋಮವಾರ ವಿಸ್ತರಿಸಿದ್ದಾರೆ. 2012ರ ಮಾರ್ಚ್‌ನಲ್ಲಿ ಅವರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇದು 7ನೆ ಬಾರಿಯ ಹಾಗೂ ಬಹುಶಃ ಕೊನೆಯ ಸಂಪುಟ ಪುನಾರಚನೆಯಾಗಿದೆ.

ಸಮಾಜವಾದಿ ಪಕ್ಷದೊಂದಿಗೆ(ಎಸ್ಪಿ) ಕ್ವಾಮಿ ಏಕತಾ ದಳದ(ಕ್ಯೂಇಡಿ) ವಿಲೀನದಲ್ಲಿ ವಹಿಸಿದ ಪಾತ್ರದ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ಉಚ್ಚಾಟಿಸಲ್ಪಟ್ಟಿದ್ದ ಮಾಜಿ ಸಚಿವ ಬಲರಾಂ ಯಾದವ್‌ರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ವಿಲೀನವನ್ನು ಹಿಂದೆ ಪಡೆಯುವ ಎಸ್ಪಿ ಸಂಸದೀಯ ಮಂಡಳಿಯ ನಿರ್ಧಾರವು ಅವರಿಗೆ ಸಂಪುಟಕ್ಕೆ ಹಾದಿಯನ್ನು ಸುಗಮಗೊಳಿಸಿದೆ.
ಪಕ್ಷವು ಶನಿವಾರ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಕ್ತಾರ್ ಅನ್ಸಾರಿಯ ಕ್ಯೂಇಡಿಯೊಂದಿಗಿನ ವಿಲೀನವನ್ನು ಹಿಂದೆ ಪಡೆದಿದೆ.
2015ರಲ್ಲಿ ಸಂಪುಟ ಪುನಾರಚನೆಯ ವೇಳೆ ಕೈಬಿಡಲಾಗಿದ್ದ ಎಸ್ಪಿ ನಾಯಕ ನಾರದ್ ರಾಯ್‌ಯವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.
ಲಕ್ನೊ-ಕೇಂದ್ರದ ಶಾಸಕ ರವಿದಾಸ್ ಮೆಹ್ರೋತ್ರಾ, ಸರೋಜಿನಿ ನಗರದ ಶಾಸಕ ಶಾರದಾ ಪ್ರತಾಪ್ ಶುಕ್ಲಾ ಹಾಗೂ ಸಿಕಂದರ್‌ಪುರ(ಬಲಿಯಾ) ಕ್ಷೇತ್ರದ ಶಾಸಕ ಮುಹಮ್ಮದ್ ಝಿಯಾವುದ್ದೀನ್ ರಿಜ್ವಿ ಸಂಪುಟದ ಹೊಸ ಮುಖಿಗಳಾಗಿದ್ದಾರೆ.
ಮನೋಜ್‌ಕುಮಾರ್ ಪಾಂಡೆಯವರನ್ನು ಮುಖ್ಯಮಂತ್ರಿ ಸಂಪುಟದಿಂದ ಕೈಬಿಟ್ಟಿದ್ದಾರೆನ್ನ ಲಾಗಿದ್ದರೂ, ಅದನ್ನೂ ಅಧಿಕೃತವಾಗಿ ಖಚಿತವಾಗಿಲ್ಲ.
ರಾಜಭವನದ ಗಾಂಧಿ ಸಭಾಗಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ರಾಮ್‌ನಾಯ್ಕ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News