ವಿಶ್ವನಾಥನ್ ಆನಂದ್‌ಗೆ ಗೌರವ ಡಾಕ್ಟರೇಟ್
ಕಾನ್ಪುರ, ಜೂ.28: ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ತನ್ನ 49ನೆ ಘಟಿಕೋತ್ಸವದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್‌ಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ನೀಡಿದೆ.
ನೀತಿ ಆಯೋಗದ ಚೇರ್‌ಮನ್ ಅರವಿಂದ್ ಪನಗರಿಯಾ 49ರ ಹರೆಯದ ಆನಂದ್‌ಗೆ ಡಾಕ್ಟರೇಟ್ ಗೌರವ ಪ್ರದಾನಿಸಿದರು.
ಗೌರವ ಡಾಕ್ಟರೇಟ್ ಗೌರವ ಸ್ವೀಕರಿಸಿದ ಮಾತನಾಡಿದ ಆನಂದ್, 1985ರಲ್ಲಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದ ಕ್ಷಣವನ್ನು ನೆನಪಿಸಿಕೊಂಡರು. ‘‘ನಾನು ಇಲ್ಲಿ ಧರಿಸಿರುವ ವಸ್ತ್ರ ರಾಷ್ಟ್ರಪತಿ ಭವನದಲ್ಲಿ ಆ ದಿನ ನಡೆದ ಸಮಾರಂಭವನ್ನು ನೆನಪು ಮಾಡಿತು’’ ಎಂದಿದ್ದಾರೆ.
‘‘1985ರಲ್ಲಿ ಭಾರತದ ಮೊದಲ ಗ್ರಾಂಡ್ ಮಾಸ್ಟರ್ ಆದ ಬಳಿಕವೂ ವಿಶ್ವ ಚಾಂಪಿಯನ್ ಆಗುವ ಗುರಿಯತ್ತ ನನ್ನ ಗಮನವನ್ನು ಕೇಂದ್ರೀಕರಿಸಿದ್ದೆ. ಇಂದು ಎಲ್ಲರೂ ಪದವೀಧರರಾಗಿದ್ದಕ್ಕೆ ಸಂಭ್ರಮಪಡುತ್ತಿದ್ದಾರೆ. ಆದರೆ, ಎಲ್ಲರೂ ತಮ್ಮ ಜೀವನದ ಮುಂದಿನ ಗುರಿಯತ್ತ ಗಮನ ನೀಡಬೇಕಾದ ಅಗತ್ಯವಿದೆ’’ ಎಂದು ಆನಂದ್ ಹೇಳಿದ್ದಾರೆ.
‘‘ನಾನು ಇಂದು ಕೂಡಾ ಚೆಸ್ ಬಗ್ಗೆ ಇನ್ನಷ್ಟು ಕಲಿಯಲು ಪ್ರಯತ್ನಿಸುತ್ತಿರುವೆ. ಏಕೆಂದರೆ ನಾವು ಕಲಿತಿರುವುದು ಮುಂದಿನ ದಿನಗಳಲ್ಲಿ ವ್ಯರ್ಥವಾಗಲಾರದು’’ ಎಂದು ಆನಂದ್ ಕಿವಿಮಾತು ಹೇಳಿದರು.