‘ನನ್ನ ಮಗಳ ರಕ್ಷಣೆಗೆ ಯಾರೂ ಪ್ರಯತ್ನಿಸಲಿಲ್ಲ’ ಹತ ಇನ್ಫೋಸಿಸ್ ಟೆಕ್ಕಿಯ ತಂದೆಯ ಅಳಲು

Update: 2016-06-28 14:53 GMT

ಚೆನ್ನೈ,ಜೂ.28: ಕಳೆದ ಶುಕ್ರವಾರ ಬೆಳ್ಳಂಬೆಳಿಗ್ಗೆ ಇಲ್ಲಿಯ ನುಂಗಂಬಾಕಂ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಇನ್ಫೋಸಿಸ್ ಉದ್ಯೋಗಿ ಸ್ವಾತಿ(24) ಯುವಕನೋರ್ವನಿಂದ ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದರೂ ಅಲ್ಲಿದ್ದ ಯಾರೂ ಆಕೆಯ ನೆರವಿಗೆ ಧಾವಿಸಿರಲಿಲ್ಲ. ಎಲ್ಲರೂ ಮಾನವೀಯತೆಯನ್ನು ಕಳೆದುಕೊಂಡುಬಿಟ್ಟಿದ್ದರು. ಸಿನಿಮಾದ ದೃಶ್ಯದಂತೆ ಅದನ್ನು ವೀಕ್ಷಿಸಿ ಮುಂದಿನ ರೈಲು ಬಂದಾಗ ಏನೂ ನಡೆದೇ ಇಲ್ಲವೆಂಬಂತೆ ಅದರಲ್ಲಿ ಪ್ರಯಾಣ ಬೆಳೆಸಿದ್ದರು. ಪೊಲೀಸರೂ ಬಂದಿದ್ದು ವಿಳಂಬವಾಗಿ. ಅವರು ಬರುವವರೆಗೂ ಎರಡು ಗಂಟೆಗಳ ಕಾಲ ಸ್ವಾತಿಯ ಶವ ಅಲ್ಲಿಯೇ ಬಿದ್ದುಕೊಂಡಿತ್ತು.
ಈ ಬರ್ಬರ ಹತ್ಯೆ ನಡೆದ ನಾಲ್ಕು ದಿನಗಳ ಬಳಿಕ ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸ್ವಾತಿಯ ತಂದೆ ಸಂತಾನ ಗೋಪಾಲಕೃಷ್ಣನ್, ಮೂಕಪ್ರೇಕ್ಷರಾಗಿದ್ದ ಅಲ್ಲಿದ್ದವರು ನಮ್ಮ ಮಗಳನ್ನು ಜೀವಂತ ನೋಡುವ ಅವಕಾಶದಿಂದ ನಮ್ಮನ್ನು ವಂಚಿಸಿದರು ಎಂದು ನೋವು ತೋಡಿಕೊಂಡರು.
ಸ್ವಾತಿ ತುಂಬ ಮೃದು ಸ್ವಭಾವದ ಹುಡುಗಿಯಾಗಿದ್ದಳು,ಕರುಣೆಯ ಸ್ವಭಾವದವಳಾಗಿದ್ದಳು. ತನ್ನ ಅಂಗಾಂಗಗಳನ್ನು ದಾನ ಮಾಡಲು ಆಕೆ ಬಯಸಿದ್ದಳು. ನಮಗೆ ಅವು ಲಭ್ಯವಿದ್ದಿದ್ದರೆ ಅಗತ್ಯವುಳ್ಳವರಿಗೆ ನಾವು ನೀಡುತ್ತಿದ್ದೆವು. ಅವರನ್ನು ನೋಡಿಯಾದರೂ ನನ್ನ ಮಗಳು ಬದುಕಿದ್ದಾಳೆ ಎಂದು ನಾವು ಸಮಾಧಾನ ಪಟ್ಟುಕೊಳ್ಳಬಹುದಾಗಿತ್ತು ಎಂದರು.
ನನ್ನ ಮಗಳ ಮೇಲೆ ದಾಳಿ ನಡೆದಾಗ ಯಾರಾದರೂ ಪ್ರತಿಕ್ರಿಯಿಸಿದ್ದರೆ ಅಥವಾ ವಿರೋಧಿಸಿದ್ದರೆ ಈ ಹತ್ಯೆಯನ್ನು ತಡೆಯಬಹುದಿತ್ತು. ಆದರೆ ಅಲ್ಲಿದ್ದವರು ಕಲ್ಲಾಗಿ ನಿಂತಿದ್ದೇಕೆ ಎನ್ನುವುದು ನನಗೆ ಗೊತ್ತಿಲ್ಲ, ಬಹುಶಃ ಹೇವರಿಕೆ ಅಥವಾ ಒಂದು ಬಗೆಯ ಸ್ವಾರ್ಥ ಕಾರಣವಿರಬಹುದು. ಯಾರೂ ಹೀಗಿರಬಾರದು ಎಂದರು.
ಸ್ವಾತಿಯ ಹಂತಕನನ್ನು ಎರಡು ದಿನಗಳಲ್ಲಿ ಪತ್ತೆ ಹಚ್ಚುವಂತೆ ಮದ್ರಾಸ ಉಚ್ಚ ನ್ಯಾಯಾಲಯವು ಸೋಮವಾರ ಚೆನ್ನೈ ಪೊಲೀಸರಿಗೆ ತಾಕೀತು ಮಾಡಿದೆ. ಇಲ್ಲದಿದ್ದರೆ ಕ್ರಮ ಎದುರಿಸುವಂತೆ ಎಚ್ಚರಿಕೆ ನೀಡಿದೆ.
ಪೊಲೀಸರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದ ನ್ಯಾಯಾಲಯವು,ಎಲ್ಲಿದ್ದಾರೆ ನಿಮ್ಮ ಪೊಲೀಸ್ ಅಧಿಕಾರಿಗಳು? ಸ್ವಾತಿಯ ಶವ ಪ್ರದರ್ಶನಕ್ಕಿಟ್ಟಂತೆ ಎರಡು ಗಂಟೆಗಳ ಕಾಲ ಅಲ್ಲಿಯೇ ಬಿದ್ದಿತ್ತು. ಸಂವಿಧಾನದಡಿ ಮೃತರಿಗೂ ಘನತೆಯ ಹಕ್ಕಿದೆ ಎಂದು ಕಿಡಿಕಾರಿತ್ತು.
ಪೊಲೀಸರು ಬಿಡುಗಡೆಗೊಳಿಸಿರುವ ವೀಡಿಯೊ ಫೂಟೇಜ್‌ಗಳಲ್ಲಿ ಬೆನ್ನಿಗೆ ಚೀಲವನ್ನು ಏರಿಸಿಕೊಂಡಿದ್ದ ಶಂಕಿತ ಹಂತಕ ಲಗುಬಗೆಯಿಂದ ನಡೆದುಕೊಂಡು ಹೋಗುತ್ತಿರುವ ಮತ್ತು ಬಳಿಕ ನಿಲ್ದಾಣದಿಂದ ಓಡುತ್ತಿರುವ ದೃಶ್ಯಗಳಿವೆ.
ಹಂತಕನನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ನಮಗೆ ಅವರ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದು ಸ್ವಾತಿಯ ತಂದೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News