ಉತ್ತರ ಪ್ರದೇಶ: ದುಡ್ಡು ಕೊಟ್ಟರೆ ಕೋಮು ದಂಗೆ ಮಾಡಿಸುವ ಮಾಫಿಯಾ

Update: 2016-06-28 18:37 GMT

ಲಕ್ನೋ,ಜೂ.28: ಧರ್ಮದ ಹೆಸರಿನಲ್ಲಿ ಹಿಂಸಾತ್ಮಕ ದಾಳಿಗಳು ನಡೆಯುತ್ತಲೇ ಇರುವ ಜಗತ್ತಿನಲ್ಲಿ ನಾವಿಂದು ಬದುಕುತ್ತಿದ್ದೇವೆ. ದ್ವೇಷ ಭಾಷಣಗಳಿಂದ ಮಾರಣಾಂತಿಕ ದಂಗೆಗಳು ವಿಶ್ವಾದ್ಯಂತ ನಡೆಯುತ್ತಲೇ ಇವೆ. ಆದರೆ ಇಂಡಿಯಾ ಟುಡೇ ಟಿವಿ ವಾಹಿನಿಯು ಕಳೆದ ಹತ್ತು ದಿನಗಳಿಂದ ನಡೆಸಿದ ಅಪರೂಪದ ತನಿಖೆಯು ಧರ್ಮಕ್ಕೆ ಸಂಬಂಧಿಸಿದಂತೆ ಎಲ್ಲ ಹಿಂಸಾಚಾರಗಳೂ ದಿಢೀರ್ ಪ್ರತಿಕ್ರಿಯೆಗಳಲ್ಲ ಎನ್ನುವುದನ್ನು ಸಾಬೀತುಗೊಳಿಸಿದೆ.

 ಇಂಡಿಯಾ ಟುಡೇ ಟಿವಿ ಉತ್ತರ ಪ್ರದೇಶದ ನೊಯ್ಡ,ಮುಝಫ್ಫರ್‌ನಗರ ಮತ್ತು ರೂರ್ಕಿಗಳಲ್ಲಿ ಹತ್ತು ದಿನಗಳ ಕಾಲ ನಡೆಸಿದ ಸರಣಿ ಕುಟುಕು ಕಾರ್ಯಾಚರಣೆಗಳು ಹಲವಾರು ನಾಯಕರು ಪಕ್ಷಭೇದ ಮರೆತು ಹಣಕ್ಕಾಗಿ ಧಾರ್ಮಿಕ ಹಿಂಸಾಚಾರಗಳನ್ನು ನಡೆಸಲು ಸಿದ್ಧರಿದ್ದಾರೆ ಎನ್ನುವುದನ್ನು ಬಯಲುಗೊಳಿಸಿವೆ. ಈ ಕಾರ್ಯಾಚರಣೆಯ ಅಂಗವಾಗಿ ಮಾರುವೇಷದಲ್ಲಿದ್ದ ವರದಿಗಾರ ಚಿತ್ರ ನಿರ್ಮಾಪಕನ ಸೋಗಿನಲ್ಲಿ ಕಪೋಲಕಲ್ಪಿತ ದೈವನಿಂದೆಯ ಸಾಕ್ಷಚಿತ್ರದ ಪ್ರದರ್ಶನದ ವಿರುದ್ಧ ದಾಳಿಗಳನ್ನು ನಡೆಸಬೇಕು ಎಂಬ ಪ್ರಸ್ತಾವನೆಯೊಂದಿಗೆ ಉತ್ತರ ಪ್ರದೇಶದ ಹಲವಾರು ಸ್ಥಳಗಳನ್ನು ಸುತ್ತಿದ್ದಾನೆ.
 ತಮ್ಮ ಗಾಢ ಧಾರ್ಮಿಕ ನಂಬಿಕೆಗಳಿಗೇ ಸವಾಲೊಡ್ಡುವ ಚಿತ್ರದ ಧಾಟಿಯ ಬಗ್ಗೆ ಈ ರಾಜಕೀಯ ನಾಯಕರಾರೂ ವೈಯಕ್ತಿಕವಾಗಿ ಅಸಹನೆಯನ್ನೇ ವ್ಯಕ್ತಪಡಿಸಲಿಲ್ಲ ಎನ್ನುವುದು ಅವರ ಇಬ್ಬಗೆಯ ಧೋರಣೆಗಳಿಗೆ ನಿದರ್ಶನವಾಗಿದೆ. ಬದಲಿಗೆ ಸಾಕ್ಷಚಿತ್ರಕ್ಕೆ ಪ್ರಚಾರ ನೀಡಲು ವ್ಯವಹಾರವೊಂದರ ಭಾಗವಾಗಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಏರ್ಪಡಿಸಲು ಅವರೆಲ್ಲ ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಅವರು ಕೇಳಿದಷ್ಟು ಹಣ ನೀಡಿದರೆ ಆಯಿತು!
ನೊಯ್ಡದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಪರ್ಮಿಂದರ್ ಆರ್ಯರನ್ನು ಭೇಟಿಯಾದ ವರದಿಗಾರ ತನ್ನ ಪ್ರಸ್ತಾವನೆಯನ್ನು ಮುಂದಿಟ್ಟಾಗ, ನೀವೇನು ಹೇಳುತ್ತೀರೋ ಅದನ್ನು ಮಾಡುತ್ತೇವೆ. ನಾನು ಇದಕ್ಕಾಗಿ 50 ಹುಡುಗರನ್ನ್ನು ಸಿದ್ಧಗೊಳಿಸಬೇಕು. ಈ ಹುಡುಗರು ಚಿತ್ರದ ಪ್ರದರ್ಶನದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸುತ್ತಾರೆ. ಜೋ ರಾಮ್ ಕಾ ನಹೀಂ ವೋ ಕಿಸೀ ಕಾಮ್ ಕಾ ನಹೀಂ,ರಾಮ್ ಕಾ ಅಪಮಾನ್ ನಹೀಂ ಸಹೇಗಾ ಹಿಂದುಸ್ಥಾನ್ ಇತ್ಯಾದಿ ಘೋಷಣೆಗಳನ್ನೂ ಅವರು ಕೂಗುತ್ತಾರೆ. ಮುಂದಿನ ಒಂದೆರಡು ದಿನಗಳಲ್ಲಿ ಶುಲ್ಕದ ಬಗ್ಗೆ ಮಾತನಾಡೋಣ ಅಥವಾ ದೂರವಾಣಿಯಲ್ಲಿ ಕೋಡ್ ವರ್ಡ್‌ಗಳ ಮೂಲಕ ನಿಗದಿಗೊಳಿಸೋಣ ಎಂದು ಅವರು ಭರವಸೆ ನೀಡಿದ್ದಾರೆ. ಅಂದ ಹಾಗೆ ವರದಿಗಾರ ಸೃಷ್ಟಿಸಿರುವ ಈ ಕಪೋಲಕಲ್ಪಿತ ಚಿತ್ರ ಶ್ರೀರಾಮನ ಜನ್ಮಭೂಮಿ ಭಾರತ ಎಂಬ ನಂಬಿಕೆಯನ್ನೇ ಪ್ರಶ್ನಿಸಿದೆ.
ಈ ಆರ್ಯ ಕಟ್ಟರ್‌ವಾದಿ ಹಿಂದೂ ಸ್ವಾಭಿಮಾನ ಸಂಘಟನೆಯ ನಾಯಕನಾಗಿದ್ದು, ಇದು ಧರ್ಮಸೇನಾ ಎಂಬ ಘಟಕವನ್ನೂ ಹೊಂದಿದೆ. ವಿಹಿಂಪ ಜೊತೆಗೂ ತನಗೆ ಸಂಬಂಧವಿದೆ ಎಂದು ಆರ್ಯ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಐಸಿಸ್‌ನ ಸಂಭಾವ್ಯ ಬೆದರಿಕೆಗಳ ವಿರುದ್ಧ ಉ.ಪ್ರದೇಶದಲ್ಲಿ ಹಿಂದೂ ಯುವಕರಿಗೆ ಜಿಹಾದ್ ವಿರೋಧಿ ತರಬೇತಿಯನ್ನು ನೀಡುವ ಮೂಲಕ ಈ ಆರ್ಯ ಸುದ್ದಿಯಾಗಿದ್ದರು.
ನಂತರ ವರದಿಗಾರ ಭೇಟಿಯಾಗಿದ್ದು 2013ರಲ್ಲಿ ಕೋಮುದಂಗೆಗೆ ಸಾಕ್ಷಿಯಾಗಿದ್ದ ಮುಝಫ್ಫರ್‌ನಗರದ ಬಿಜೆಪಿ ಶಾಸಕ ಕಪಿಲ ದೇವ್ ಅಗರವಾಲ್ ಅವರನ್ನು. ಬೋಗಸ್ ಸಾಕ್ಷಚಿತ್ರದ ಹಿಂದು ವಿರೋಧಿ ವಿಷಯದ ಅರಿವಾದರೂ ಅವರು ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನಿಮ್ಮ ಚಿತ್ರದ ಪ್ರಚಾರಕ್ಕೆ ನೀವು ಬಯಸಿದಂತೆ ದಂಗೆ ಮಾಡಿಸುತ್ತೇನೆ. ಇದಕ್ಕಾಗಿ ನೀವು ಎಷ್ಟು ದುಡ್ಡುಕೊಡುತ್ತೀರಾ... ಹೇಳಿ ಎಂದು ಅಗರವಾಲ್ ಪ್ರಶ್ನಿಸಿದ್ದು ವರದಿಗಾರನ ರಹಸ್ಯ ಕ್ಯಾಮರಾದಲ್ಲಿ ದಾಖಲಾಗಿದೆ.
ರೂರ್ಕಿಯಲ್ಲಿ ಸಮಾಜವಾದಿ ಪಕ್ಷದ ಹರಿದ್ವಾರ ಘಟಕದ ಅಧ್ಯಕ್ಷ ಹಫೀಝ್ ಮುಹಮ್ಮದ್ ಖಾನ್‌ರನ್ನು ವರದಿಗಾರ ಭೇಟಿಯಾಗಿದ್ದು ದಂಗೆ ನಡೆಸಲು ಅವರೂ ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ಮುಸ್ಲಿಮ್ ವಿರೋಧಿ ಅಂಶಗಳೂ ಇದ್ದರೆ ಒಳ್ಳೆಯದಿತ್ತು ಎಂದು ಪುಕ್ಕಟೆ ಸಲಹೆಯನ್ನೂ ನೀಡಿದ್ದಾರೆ. ಇದಕ್ಕಾಗಿ ಅವರು ಡಿಮ್ಯಾಂಡ್ ಮಾಡಿರುವುದು ಐದು ಲಕ್ಷ ರೂ.ಗಳನ್ನು. ಇದೆಲ್ಲವೂ ಕ್ಯಾಮರಾದಲ್ಲಿ ದಾಖಲಾಗಿದೆ.
 

ಇದೆಲ್ಲವೂ ಪ್ರತಿಪಕ್ಷಗಳ ಷಡ್ಯಂತ್ರ ಎಂದು ಎಸ್‌ಪಿ ನಾಯಕಿ ಜುಹಿ ಸಿಂಗ್ ಆಪಾದಿಸಿದ್ದಾರೆ. ಆದರೂ ಕುಟುಕು ಕಾರ್ಯಾಚರಣೆಯ ಫೂಟೇಜನ್ನು ಪಕ್ಷವು ಪರಿಶೀಲಿಸಿ ಅಗತ್ಯವಾದರೆ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ರಾಜ್ಯ ಸರಕಾರದ್ದು ಎಂದಿರುವ ಬಿಜೆಪಿ ವಕ್ತಾರೆ ಮುಝಫ್ಫರ್‌ನಗರ ಮೂಲದ ಅನಿಲಾ ಸಿಂಗ್,ನಾವು ಮೊದಲು ಫೂಟೇಜನ್ನು ಪರಿಶೀಲಿಸಿ ಬಳಿಕ ಯಾವುದೇ ತನಿಖೆಗೆ ಆದೇಶಿಸುತ್ತೇವೆ ಎಂದಿದ್ದಾರೆ ಈ ಕುಟುಕು ಕಾರ್ಯಾಚರಣೆ ಎಸ್‌ಪಿ ಮತ್ತು ಬಿಜೆಪಿಗಳನ್ನು ಬೆತ್ತಲೆಯಾಗಿಸಿವೆ ಎಂದು ಬಿಎಸ್‌ಪಿ ನಾಯಕ ಸುಧೀಂದ್ರ ಭದೋರಿಯಾ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News