ಎಂಟು ವರ್ಷಗಳ ಕಾಲ ಇಟ್ಟಿಗೆ ಹೊತ್ತ ಯುವತಿ ಕೊನೆಗೂ ಪ್ರತಿಷ್ಠಿತ ಕಾಲೇಜು ಮೆಟ್ಟಿಲೇರಿದಳು

Update: 2016-06-29 08:36 GMT

ರಾಂಚಿ, ಜೂ.29: ಒಂದು ತಿಂಗಳ ಹಿಂದೆ 16ರ ಹರೆಯದ ಮೀರಾ ಕೋಯಾ ಜೀವನೋಪಾಯಕ್ಕಾಗಿ ಕಟ್ಟಡ ಕಾರ್ಮಿಕಳಾಗಿದ್ದಳು. 10ನೆ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದರೂ ಶಿಕ್ಷಣ ಮುಂದುವರಿಸಲಾಗದೆ ಮರುಗುತ್ತಿದ್ದಳು.

ಮಂಗಳವಾರ ರಾಂಚಿಯ ಪ್ರತಿಷ್ಠಿತ ಸಂಸ್ಥೆ ನಿರ್ಮಲಾ ಮಹಿಳಾ ಕಾಲೇಜಿಗೆ ಮೀರಾ ಪ್ರವೇಶ ಪಡೆದಿದ್ದಾರೆ. ಕಾಲೇಜು ಆಕೆಗೆ ವಿದ್ಯಾರ್ಥಿವೇತನ ಕೊಡಿಸುವ ಜೊತೆಗೆ ಹಾಸ್ಟೆಲ್ ಸೀಟನ್ನು ನೀಡುವ ಭರವಸೆ ನೀಡಿದೆ.

‘‘ನನಗೆ ಈಗ ತುಂಬಾ ಖುಷಿಯಾಗುತ್ತಿದೆ. ನನ್ನ ಸಹಾಯಕ್ಕೆ ಬಂದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವೆ. ಇದು ನನ್ನ ಕನಸು ಈಡೇರಿಸಿಕೊಳ್ಳಲು ಲಭಿಸಿದ ಉತ್ತಮ ಅವಕಾಶವಾಗಿದೆ’’ ಎಂದು ಮೀರಾ ಹೇಳುತ್ತಾರೆ.

ಮೀರಾ ಬದುಕಿನ ಕಷ್ಟದ ಕಥೆ ಕೇಳಿದ ಜನರು ಸಹಾಯ ಹಸ್ತವನ್ನು ಚಾಚಿದ್ದು, ಈಗ ಆಕೆಯ ಬ್ಯಾಂಕ್ ಖಾತೆಯಲ್ಲಿ 3 ಲಕ್ಷ ರೂ. ಜಮೆಯಾಗಿದೆ.

ಮೀರಾ 8ನೆ ವರ್ಷದಲ್ಲಿ ಕಟ್ಟಡ ಕೆಲಸ ಮಾಡಲಾರಂಭಿಸಿದ್ದರು. ದಿನಕ್ಕೆ 12 ಗಂಟೆಗಳ ಕಾಲ ಇಟ್ಟಿಗೆಯನ್ನು ಹೊರುತ್ತಿದ್ದರು. ಕೆಲವೊಂದು ದಿನ 200 ರೂ. ಗಳಿಸುತ್ತಿದ್ದರು. ಬಿಡುವಿದ್ದಾಗ ಖಾಸಗಿ ಶಾಲೆಗೆ ತೆರಳಿ ಅಭ್ಯಾಸ ಮಾಡುತ್ತಿದ್ದಳು.

ಮೀರಾಳ ತಂದೆ 12 ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಆಕೆಯ ತಾಯಿ ತನಗೆ ಸಿಕ್ಕಿದ ಕೆಲಸವನ್ನು ಮಾಡುತ್ತಾ ಜೀವನ ಸಾಗಿತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News