ಗುರುವಾರ ಕೇಂದ್ರ ಸಂಪುಟ ಪುನಾರಚನೆ ಸಾಧ್ಯತೆ

Update: 2016-06-29 06:48 GMT

ಹೊಸದಿಲ್ಲಿ, ಜೂ.29: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯಿದೆ. ಜಾತಿವಾರು ಹಾಗೂ ಪ್ರಾದೇಶಿಕ ಸಮತೋಲನವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ಪುನಾರಚನೆ ಮಾಡುವ ನಿರೀಕ್ಷೆಯಿದೆ.

  ಇಲ್ಲಿನ ರಾಷ್ಟ್ರಪತಿ ಭವನದ ಅಶೋಕ್ ಹಾಲ್ ಸಂಪುಟ ಪುನರಚನಾ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಧಾನಮಂತ್ರಿಗಳು ಪ್ರಮುಖ ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯ ರಾಜ್ಯ ಸಚಿವ ನಿಹಾಲ್ ಚಂದ್‌ರನ್ನು ಸಂಪುಟದಿಂದ ಕೈಬಿಟ್ಟು ರಾಜಸ್ಥಾನದ ಮತ್ತೊಬ್ಬ ಹಿರಿಯ ಬಿಜೆಪಿ ಮುಖಂಡ ಅರ್ಜುನ್ ಮೆಘಾವಲ್‌ರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ ಮೂಲಗಳು ತಿಳಿಸಿವೆ.

 ಸಂಪುಟ ಸೇರಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಬಲ್ಪುರದ ಸಂಸದ ರಾಕೇಶ್ ಸಿಂಗ್, ಅಸ್ಸಾಂನ ಮಂಗಳ್‌ದೋಯಿ ಸಂಸದ ರಮಣ್ ದೇಕಾ, ಇತ್ತೀಚೆಗೆ ಮಹಾರಾಷ್ಟ್ರದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಬಿಜೆಪಿ ಉಪಾಧ್ಯಕ್ಷ ವಿನಯ್ ಸಹಸ್ರಬುದ್ದೆ ಅವರು ಸ್ಥಾನ ಪಡೆದಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಕೃಷಿ ಹಾಗೂ ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವ ಸಂಜೀವ್ ಬಲ್ಯಾನ್‌ಗೆ ಸ್ವತಂತ್ರ ಖಾತೆಗೆ ಭಡ್ತಿ ಸಿಗುವ ಸಾಧ್ಯತೆಯಿದೆ.

  ರಾಜ್ಯದ ಒಬಿಸಿ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಅಪ್ನಾ ದಳದ ಸಂಸದೆ ಅನುಪ್ರಿಯಾ ಪಟೇಲ್‌ಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ. ಸರ್ಬಾನಂದ ಸೊನೊವಾಲ್ ಅಸ್ಸಾಂ ಮುಖ್ಯಮಂತ್ರಿಯಾದ ಕಾರಣ ಕ್ರೀಡಾ ಹಾಗೂ ಯುವಜನ ವ್ಯವಹಾರ ಖಾತೆ ತೆರವಾಗಿದೆ.

ಪಂಜಾಬ್‌ನ ಬಿಜೆಪಿ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಇನ್ನೋರ್ವ ರಾಜ್ಯ ಸಚಿವ ವಿಜಯ್ ಸಂಪ್ಲಾರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯೂ ತೆರವುಗೊಂಡಿದೆ. ಅಲ್ಪಸಂಖ್ಯಾತ ವ್ಯವಹಾರ ಸಚಿವೆ ನಜ್ಮಾ ಹೆಫ್ತುಲ್ಲಾರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಹೆಚ್ಚು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News