ವಾಟ್ಸ್ ಆ್ಯಪ್ ನಿಷೇಧಕ್ಕೆ ಸುಪ್ರೀಂ ನಕಾರ

Update: 2016-06-29 17:28 GMT

ಹೊಸದಿಲ್ಲಿ, ಜೂ.29: ಸಂದೇಶವಾಹಕ ಮೊಬೈಲ್ ಅಪ್ಲಿಕೇಶನ್ ‘ವಾಟ್ಸ್‌ಆ್ಯಪ್’ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ. ದೇಶದ ಭದ್ರತೆಯ ಹಿತಾಸಕ್ತಿಯಿಂದ ವಾಟ್ಸ್‌ಆ್ಯಪ್ ಮತ್ತಿತರ ಸಂದೇಶವಾಹಕ ಆ್ಯಪ್‌ಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಹರ್ಯಾಣದ ಮಾಹಿತಿ ಹಕ್ಕು ಕಾರ್ಯಕರ್ತ ಸುಧೀರ್ ಯಾದವ್ ಎಂಬವರು ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ್ದರು.

  ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುವ ಸಂದೇಶಗಳನ್ನು ಭೇದಿಸಲು ಸಾಧ್ಯವಿಲ್ಲದಿರುವುದರಿಂದ, ಅದು ದೇಶದ ಭದ್ರತೆಗೆ ಬೆದರಿಕೆಯಾಗಿದೆಯೆಂದು ಯಾದವ್ ಅರ್ಜಿಯಲ್ಲಿ ತಿಳಿಸಿದ್ದರು. ವಾಟ್ಸ್‌ಆ್ಯಪ್‌ನಂತೆ ಇತರ ಮೆಸೆಂಜರ್ ಆ್ಯಪ್‌ಗಳಾದ ಹೈಕ್, ವೈಬರ್ ಹಾಗೂ ಸೆಕ್ಯೂರ್‌ಗಳನ್ನು ಕೂಡಾ ನಿಷೇಧಿಸಬೇಕೆಂದು ಅವರು ಆಗ್ರಹಿಸಿದ್ದರು.
 
 ಒಂದು ವೇಳೆ ವಾಟ್ಸ್‌ಆ್ಯಪ್‌ನಲ್ಲಿ ಪ್ರಸಾರವಾದ ವ್ಯಕ್ತಿಯ ಸಂದೇಶದ ದತ್ತಾಂಶಗಳನ್ನು ಸರಕಾರಕ್ಕೆ ಹಸ್ತಾಂತರಿಸುವಂತೆ ವಾಟ್ಸ್‌ಆ್ಯಪ್‌ಗೆ ಸೂಚಿಸಿದರೂ ಅದಕ್ಕೂ ಸಾಧ್ಯವಾಗದು. ಯಾಕೆಂದರೆ ವಾಟ್ಸ್‌ಆ್ಯಪ್‌ಗೂ ಸಹ ಸಂದೇಶ ದತ್ತಾಂಶಗಳನ್ನು ಭೇದಿಸುವ ವ್ಯವಸ್ಥೆಯಿಲ್ಲವೆಂದು ಯಾದವ್ ವಾದಿಸಿದ್ದರು. ಆದಾಗ್ಯೂ ಸಹ ಈ ಸಮಸ್ಯೆಯ ಕುರಿತಾಗಿ ಟೆಲಿಕಾಂ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠವು, ಸುಧೀರ್ ಯಾದವ್‌ಗೆ ಸೂಚಿಸಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News