ಪ್ರತಿಭಾ ಪಲಾಯನದ ಬೆನ್ನು ಹತ್ತಿ...

Update: 2016-06-29 18:23 GMT

ಪ್ರತಿಭೆಯಿರುವ ಜೀವಿ ಅವಕಾಶವಿರುವ ಕಡೆಗೆ ಹೋಗುವುದು ಪ್ರಕೃತಿ ನಿಯಮ. ನೀರಿಲ್ಲದಾಗ ಹಕ್ಕಿಗಳು ನೀರಿರುವ ಕಡೆಗೆ, ಹವಾಮಾನ ವೈಪರೀತ್ಯವಿರುವಾಗ ಅನುಕೂಲ ಹವಾಮಾನವಿರುವ ಕಡೆಗೆ ವಲಸೆ ಹೋಗುತ್ತವೆ. ಕಾಡುಗಳು ಮತ್ತು ಅಲ್ಲಿರುವ ಪ್ರಕೃತಿದತ್ತವಾದ ನೀರು, ಗೆಡ್ಡೆಗೆಣಸುಗಳು, ಹಣ್ಣು ಹಂಪಲುಗಳು, ಬಿದಿರು ಮೆಳೆ ಇತ್ಯಾದಿ ಆಹಾರ ರೂಪದ ಸಹಜ ಸಂಪತ್ತುಗಳು ಇತ್ತೀಚೆಗೆ ಮನುಷ್ಯನ ದುರಾಸೆಗೆ ಬಲಿಯಾಗಿ ನಶಿಸಿಹೋಗುತ್ತಿರುವುದರಿಂದ ವನ್ಯ ಪ್ರಾಣಿಪಕ್ಷಿಗಳು ಮಾತ್ರವಲ್ಲ ಅಲ್ಲಿ ಪ್ರಾಣಿಗಳೊಂದಿಗೆ ಪರಸ್ಪರ ಪೂರಕವಾದ ಹಿತಮಿತ ಬದುಕನ್ನು ಸಾಗಿಸುತ್ತಿದ್ದ ವನವಾಸಿಗಳೂ ಕಾಡನ್ನು ತೊರೆದು ನಾಡಿಗೆ ಬರುವುದನ್ನು ಕಾಣಬಹುದು. ವಲಸೆ ಒಂದು ಸಮಾಜದ (ಅವ) ಲಕ್ಷಣವಾದಾಗ ಕೊಳೆಯುತ್ತದೆ.

ಹೀಗೆ ಬರುವ ಪ್ರಾಣಿಪಕ್ಷಿಗಳು ನಮ್ಮ ಜೀವಾಧಾರವಾದ ಬೆಳೆಗಳನ್ನು ನಾಶಮಾಡುತ್ತೇವೆಂದು ನಾವು ಗೋಳಿಡುತ್ತೇವೆ. ಅವುಗಳನ್ನು ನಾಶಮಾಡಬೇಕೆಂಬ ಬೇಡಿಕೆಯಿಡುತ್ತೇವೆ. ನನ್ನ ಸ್ನೇಹಿತರೊಬ್ಬರು ಆನೆಗಳು ಬಂದು ತಮ್ಮ ತೋಟದ ಬೆಳೆಗಳನ್ನು ನಾಶಮಾಡುತ್ತಿವೆಯೆಂದು ಆಕ್ರೋಶ ವ್ಯಕ್ತಪಡಿಸಿದರು. ‘‘ನಾನು ತಮಾಷೆಯಾಗಿ ಊರುಗಳು ವೃದ್ಧಾಶ್ರಮಗಳಾಗುತ್ತಿವೆ. ಆಶ್ರಮಗಳೆಂದರೆ ಅಲ್ಲಿ ಪ್ರಾಣಿಪಕ್ಷಿಗಳಿರಬೇಕಲ್ಲ! ಊರಿನಲ್ಲಿ ಬದುಕಿಗೆ ಪೂರಕವಾದ ಅವಕಾಶವಿಲ್ಲದಾಗ ಹುಡುಗರೆಲ್ಲ ಕೆಲಸ ಹುಡುಕಿಕೊಂಡು ಕೆಲಸ ಸಿಗದಿದ್ದರೆ ಹೇಗೋ ಬದುಕು ಸಾಗಿಸುವ ಇರಾದೆಯಿಂದ ಬೆಂಗಳೂರಿನಂತಹ ಮಹಾನಗರಗಳನ್ನು ಹುಡುಕಿಕೊಂಡು ಹೋಗುತ್ತಿರುವಾಗ ಹಳ್ಳಿಗಳಲ್ಲಿ ಮುದುಕರಲ್ಲದೆ ಇನ್ಯಾರಾದರೂ ಇರಬೇಕಲ್ಲ, ಈ ಕೊರತೆಯನ್ನು ಪ್ರಾಣಿಪಕ್ಷಿಗಳು ತುಂಬಿಕೊಡುತ್ತವೆ’’ ಎಂದೆ. ಇದು ಅವರಿಗೆ ಅರ್ಥವಾಯಿತೋ ಇಲ್ಲವೊ ಗೊತ್ತಿಲ್ಲ. ಸುಮ್ಮನಾದರು.

ಮನುಷ್ಯರನ್ನು ಪ್ರಾಣಿಗಳಿಗೆ ಹೋಲಿಸುವುದು ಸರಿಯಾದ ತರ್ಕವಾಗುವುದಿಲ್ಲ. ಮನುಷ್ಯ ಯೋಚಿಸಬಲ್ಲ ಪ್ರಾಣಿ ಎನ್ನುತ್ತೇವೆ ಅಲ್ಲವೇ? ನಾವೇನು ಯೋಚಿಸುತ್ತೇವೆ? ವಲಸೆ ಮನುಷ್ಯ ಸಹಜ. ಅನೇಕ ನಾಗರಿಕತೆಗಳು ಇಂತಹ ವಲಸೆಯ ಪ್ರಪಂಚದಲ್ಲೇ ಸೃಷ್ಟಿಯಾಗಿವೆ. ನಮ್ಮ ದೇಶದಲ್ಲೂ ಉನ್ನತ ಶಿಕ್ಷಣವು ದುರ್ಲಭವಾಗಿದ್ದಾಗ ಅಥವಾ ಕಲಿತರೂ ಸರಿಯಾದ ಉದ್ಯೋಗಗಳು ಸೃಷ್ಟಿಯಾಗದಿದ್ದಾಗ ಕಲಿತ ಮಂದಿ ಪರದೇಶಗಳಿಗೆ ಹೋಗಿದ್ದಾರೆ. ಹೋದವರು ಬಹುಕಾಲ ಅಲ್ಲೇ ನಿಂತು ನೆಲೆಸಿದ್ದಾರೆ. ಮಕ್ಕಳು ಮೊಮ್ಮಕ್ಕಳು ಅಲ್ಲಿನ ಶಿಕ್ಷಣ ಪಡೆದು, ಅಲ್ಲಿನ ಜಾಯಮಾಕ್ಕೆ ಹೊಂದಿಕೊಂಡು ಕೊನೆಗೆ ಅಲ್ಲಿನವರೇ ಆಗಿಹೋಗಿದ್ದಾರೆ. ಯಾವತ್ತೋ ಒಂದುದಿನ ಹಬ್ಬಹರಿದಿನ, ಇಲ್ಲವೇ ಮದುವೆ ಮುಂತಾದ ವಿಶೇಷ ಸಮಾರಂಭಗಳಿಗೆ ಬಂದು ತಮ್ಮ ತಮ್ಮ ಮನೆಗಳಲ್ಲೂ ಉಪಚಾರವನ್ನು ಬಯಸುತ್ತ/ಪಡೆಯುತ್ತ ಅತಿಥಿ ಕಲಾವಿದರಂತೆ ವರ್ತಿಸುವವರನ್ನು ಕಂಡಿದ್ದೇನೆ. ಮನೆಯ ಮಂದಿ ಇವರು ಬಂದ ಸಂತಸವನ್ನು ಕನಸಿನಂತೆ ಅನುಭವಿಸುತ್ತಾರೆ.

 ಇತ್ತೀಚೆಗೆ ವಿಶ್ವವೇ ಒಂದು ಗ್ರಾಮದಂತಾಗಿದೆಯೆಂದು ಹೇಳುವವರು ಹೆಚ್ಚಾಗಿದ್ದಾರೆ. ಆದರೆ ಒಂದು ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಅಸಮತೋಲನ ಮತ್ತು ಅಪಾರದರ್ಶಕತೆಯ ಪರಿಣಾಮವಾಗಿ ಯಾವುದೇ ಗ್ರಾಮರಾಜ್ಯದಲ್ಲಿ ಮಾಮೂಲಾಗಿರುವ ಕೊಡುಕೊಳ್ಳುವಿಕೆ ಈ ವಲಸೆಗಾರರಲ್ಲಿ ಕಾಣಿಸುವುದಿಲ್ಲ.

ಇನ್ನು ಕೆಲವರಿಗೆ ತಾವೆಷ್ಟೇ ಕಷ್ಟ, ಸಂಕಟ, ದುಃಖ, ದುಮ್ಮಾನ-ಅವಮಾನ ಅನುಭವಿಸಿಕೊಂಡಿರಲಿ, ತಮ್ಮ ಮಗ, ಮಗಳು ಅಮೆರಿಕ-ಯುರೋಪ್ ಮುಂತಾದ ವಿದೇಶಗಳಲ್ಲಿ ಇದ್ದಾರೆಂದು ಹೇಳಿಕೊಳ್ಳುವುದರಲ್ಲೇ ಸಂತೋಷಪಡುತ್ತಾರೆ. ಈಚೆಗೆ ಹಿರಿಯರೊಬ್ಬರಲ್ಲಿ ಹೇಗಿದ್ದೀರಿ ಎಂದು ಔಪಚಾರಿಕವಾಗಿ ಕೇಳಿದಾಗ ಅವರು ‘‘ನಾನೂ ನನ್ನ ಪತ್ನಿಯೂ ವೃದ್ಧಾಶ್ರಮದಲ್ಲಿದ್ದೇವೆ’’ ಎಂದು ಹೇಳಿದರು. ಅವರ ಮಕ್ಕಳೆಲ್ಲಾ ದೊಡ್ಡ ದೊಡ್ಡ ಉದ್ಯೋಗಳಲ್ಲಿ ವಿದೇಶದಲ್ಲಿದ್ದಾರೆ. ‘‘ಯಾಕೆ ನಿಮ್ಮ ಮನೆ-ಆಸ್ತಿಪಾಸ್ತಿ ಮಾರಿದರಾ?’’ ಎಂದು ಕೇಳಿದೆ. ‘‘ಇಲ್ಲ ನಮ್ಮ ಮನೆಯೇ ನಮಗೆ ವೃದ್ಧಾಶ್ರಮವಾಗಿದೆ. ಕೆಲಸಕ್ಕೆ ಜನ ಸಿಗುವುದಿಲ್ಲ, ತೋಟವೆಲ್ಲ ಕಾಡಾಗಿದೆ; ಮಕ್ಕಳೇನೋ ವರ್ಷ-ಎರಡು ವರ್ಷಗಳಿಗೊಮ್ಮೆ ಬಂದು ನಾಲ್ಕು ದಿನ ಇದ್ದು ಹೋಗುತ್ತಾರೆ, ಆದರೆ ಇಲ್ಲಿ ಉಳಿಯುವವರ್ಯಾರೂ ಇಲ್ಲ, ನಾವೇನು ಮಾಡಲಿ?’’ ಎಂದರು. ಆಸ್ತಿ ಮಾರಿ ಮಕ್ಕಳೊಂದಿಗೆ ಹೋಗಿ ನೆಲೆಸಿ ಎಂದು ವ್ಯಾವಹಾರಿಕವಾದ ಸಲಹೆ ನೀಡಿದೆ. ಅದಕ್ಕವರು ‘‘ಹಾಗೆ ಮಾಡಬಹುದಿತ್ತು, ಆದರೆ ಮಕ್ಕಳು ಆಸ್ತಿ ಮಾರಾಟಕ್ಕೆ ಒಪ್ಪುವುದಿಲ್ಲ; ಇರಲಿ; ಪಿತ್ರಾರ್ಜಿತವಾದ್ದು, ಹಣದ ಅಗತ್ಯವಿಲ್ಲವಲ್ಲ, ನಮಗೆ ಇನ್ನು ಅಲ್ಲಿ ಬದುಕುವುದು ಸಾಧ್ಯವಿಲ್ಲ; ಮೇಲಾಗಿ ಮಕ್ಕಳು ಆಸ್ತಿ ಯಾಕೆ ಮಾರುತ್ತೀರಿ, ಇರಲಿ ಎನ್ನುತ್ತಾರೆ; ಬಂದು ಕೆಲಸ ಮಾಡಿಸುವವರಿಲ್ಲ, ನಮಗೋ ನೋಡಿ ಸುಮ್ಮನಿರುವುದು ಸಾಧ್ಯವಿಲ್ಲ, ಹಾಗಾಗಿ ನಾವೇ ಗಂಡ-ಹೆಂಡತಿ ಹೇಗೋ ಸುಧಾರಿಸಿಕೊಂಡು ಹೋಗುತ್ತೇವೆ’’ ಎಂದರು. ಅಯ್ಯೋ ಎನ್ನಿಸಿತು.

ಇದು ಹಳ್ಳಿಯ ಸಾಮಾನ್ಯ ಲಕ್ಷಣವಾದರೆ ನಗರದ ಮಂದಿಯ ಇನ್ನೊಂದು ಸೂತಕವಿದೆ: ನಮ್ಮ ಯುವಜನರು ಮಾತ್ರವಲ್ಲ, ಸಾಕಷ್ಟು ಅನುಭವದ ಹಿರಿಯರು ಕೂಡಾ ಮಾತೆತ್ತಿದರೆ ದೇಶಭಕ್ತಿ, ದೇಶಾಭಿಮಾನ ಎನ್ನುತ್ತ ಈ ದೇಶವನ್ನು ವಿಶ್ವಮಾನ್ಯವಾಗಿಸುವತ್ತ ಪ್ರಯತ್ನಿಸಬೇಕೆಂದು ಫೇಸ್ ಬುಕ್, ಟ್ವಿಟರ್‌ಗಳಲ್ಲಿ ಹೇಳುತ್ತಾರೆ. ಆದರೆ ನಮ್ಮ ದೇಶದ ಬದುಕನ್ನು ಹಸನುಮಾಡಬಲ್ಲ ಕೃಷಿಯ ಬಗ್ಗೆ ಮಾತ್ರವಲ್ಲ, ಭಾರತದಲ್ಲಿ ನೆಲೆಸಲು ನಿರಾಸಕ್ತಿ ತೋರುತ್ತಾರೆ. ಊರಿನಲ್ಲಿರುವ ಮುದುಕರನ್ನು ಬಿಟ್ಟು ನಗರಗಳ ಸುಖಕ್ಕೆ ಮನಸೋಲುತ್ತಾರೆ. ನನಗೆ ಪರಿಚಯವಿರುವ ಅಥವಾ ಸಂಬಂಧವಿರುವ ಕೆಲವರು ಮನೆಯಲ್ಲಿ ಲಕ್ಷೋಪಲಕ್ಷ ಕೃಷಿ ಆದಾಯವನ್ನು ತರಬಲ್ಲ ಕೃಷಿ ಪರಿಶ್ರಮವನ್ನು ಹೆತ್ತವರಿಗೆ ಬಿಟ್ಟು ಕೆಲವೇ ಸಾವಿರದ ಮಾಸಿಕ ಸಂಬಳಕ್ಕೆ ನಗರಗಳನ್ನು ಸೇರಿದ್ದಾರೆ. ಹೀಗೆ ನಗರದ ಮಹಾ ಸಮುದ್ರದಲ್ಲಿ ಒಂದಾದವರು ನಗರಗಳಲ್ಲಿ ಬಹುಪಾಲು ಸಮಯವನ್ನು ರಸ್ತೆ ತಡೆ (ಟ್ರಾಫಿಕ್ ಜಾಮ್) ಗಳಲ್ಲಿ, ಇನ್ನುಳಿದ ಹೊತ್ತನ್ನು ಬೈಟು ಕುಡಿಯವುದರಲ್ಲಿ, ಒಂದಷ್ಟು ಹೊತ್ತು ತಮ್ಮ ವಯಸ್ಸು, ವಿದ್ಯೆ, ಪ್ರತಿಭೆ, ಸಾಮರ್ಥ್ಯಕ್ಕೆ ಸಲ್ಲದ ಊಳಿಗದಲ್ಲಿ ಕಳೆದು ಹಾಗೂ ಹೀಗೂ 45 ವಸಂತಗಳಲ್ಲಿ ವೃದ್ಧಾಪ್ಯಕ್ಕೆ ಸಹಜವಾದ ಅನಾರೋಗ್ಯ, ವೈರಾಗ್ಯಗಳನ್ನು ತುಂಬಿಕೊಳ್ಳುತ್ತಾರೆ; ಸಮಾಜದಲ್ಲಿ ದಕ್ಕಬೇಕಾದ ಐಡೆಂಟಿಟಿ ಅಥವಾ ಅಸ್ತಿತ್ವದ ಕುರುಹನ್ನೇ ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಬದುಕನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲಾಗದ ಕೊರಗನ್ನೂ ಬಹುಜನರು ಅನುಭವಿಸುತ್ತಿದ್ದಾರೆ. ಸಾಂದರ್ಭಿಕವಾಗಿ ಊರಿಗೆ ಬಂದಾಗ ತೋರಿಕೆಯ ದೊಡ್ಡಸ್ತಿಕೆಯನ್ನು ಪ್ರದರ್ಶಿಸುವುದು ಇವರಿಗೆ ಅನಿವಾರ್ಯವಾಗುತ್ತದೆ. ತಮ್ಮ ಬೇರುಗಳನ್ನು ಹುಡುಕಿಕೊಂಡು ಹಳ್ಳಿಗಳನ್ನು ಸಂದರ್ಶಿಸುವಾಗ ನಗರಗಳಲ್ಲಿ ತಾನು ಮತ್ತು ತನ್ನಂಥವರು ಹೀಗೆ ಬದುಕುತ್ತಿದ್ದೇವೆಂದು ಹೇಳಿಕೊಳ್ಳಲಾಗದ ತೊಳಲಾಟವನ್ನು ಅನುಭವಿಸುತ್ತಾರೆ.

ಯಾವುದು ಅವಕಾಶ?

ಅವಕಾಶ ಎನ್ನುವುದು ಮನಸ್ಥಿತಿಯನ್ನು ಹೊಂದಿದೆ. ನಮಗಿರುವ ಅವಕಾಶದಲ್ಲಿ ಬದುಕನ್ನು ತುಂಬಿಕೊಳ್ಳುವುದು ನಮ್ಮ ಹಿರಿತನ, ಧೀಮಂತಿಕೆ. ಅಮೆರಿಕದಲ್ಲಿ ಕೊತ್ತಂಬರಿ ಸೊಪ್ಪುಸಿಗುತ್ತದೆ, ಅದನ್ನು ಬಳಸಿಕೊಂಡು ಅಲ್ಲಿ ಅಡಿಗೆ ಮಾಡುತ್ತೇವೆ ಎನ್ನುವುದು ಹೆಮ್ಮೆಯ ಸಂಗತಿಯಾಗಿ ಕಾಣುವುದಿಲ್ಲ. ಅದೆ ಮಂದಿ, ಈ ಕೊತ್ತಂಬರಿಯನ್ನು ತಮ್ಮ ಊರುಗಳಲ್ಲಿ ಎಂದಾದರೂ ಬೆಳೆಸಿದ್ದೇವೆಂದು, ಅಥವಾ ಅದನ್ನು ಬೆಳೆಸುವ ಮನಸ್ಸು ಹೊತ್ತು ಸ್ವದೇಶಾಗಮನ ಮಾಡಿದರೆ ಹೆಮ್ಮೆಯಾಗಬಹುದು. ಬದುಕಿನ ವ್ಯಾಪಾರದಲ್ಲಿ ಎಲ್ಲೋ ಹುಟ್ಟಿಬೆಳೆದವರು ಇನ್ನೆಲ್ಲೋ ನೆಲೆಸುವುದು ಅಸಹಜವಲ್ಲ; ಅಪರೂಪವೂ ಅಲ್ಲ. ಆದರೆ ಹೊಟ್ಟೆ ತುಂಬಿದ ಮೇಲೂ ಊಟದ ತಟ್ಟೆಯ ಎದುರು ಕುಳಿತುಕೊಳ್ಳುವವರನ್ನು ಏನನ್ನಬೇಕು? ಇತಿಹಾಸವನ್ನು ಗಮನಿಸಿದರೆ ಬ್ರಿಟಿಷರು ಭಾರತ ಅಂತಲ್ಲ ಯಾವುದೇ ವಸಾಹತುಗಳಲ್ಲಿ ವ್ಯಾಪಾರ, ಆಡಳಿತ ನಡೆಸಿದರೂ ಸಂಪತ್ತನ್ನು ದೋಚುವ ಕಾರ್ಯವಾದ ನಂತರ ಮರಳಿದ್ದಾರೆ. ಆದರೆ ನಮ್ಮ ವಿದ್ಯಾವಂತರು ಮಾತ್ರ ಹೀಗೆ ಮರಳುವ ಜಾಯಮಾನವನ್ನು ಅಲಕ್ಷಿಸಿದ್ದಾರೆ. ವಿದೇಶಕ್ಕೆ ಹೋಗುವ ಬಹಳಷ್ಟು ಮಂದಿ ಒಂದಷ್ಟು ವರ್ಷ ಅಲ್ಲಿ ಕೆಲಸ ಮಾಡಿ ಅನಂತರ ತಮ್ಮ ಮಾತೃಭೂಮಿಗೆ ಸೇವೆ ಮಾಡುವ ಉದ್ದುದ್ದ ಭಾಷಣಗಳನ್ನು ಬಿಗಿಯುತ್ತಾರೆ. ಆದರೆ ಒಮ್ಮೆ ಅಲ್ಲಿ ಅನುಕೂಲವಾಯಿತೋ ಹಸಿರು ಕಾರ್ಡು ಎಂಬ ಶಾಶ್ವತ ನೆಲೆಗೆ ತಲುಪುತ್ತಾರೆ. ಹಾಗಾಗಬಾರದು; ಬದಲಾಗಿ ಅಲ್ಲಿ ಸಂಪಾದಿಸಿದ ಒಂದು ಭಾಗವನ್ನಾದರೂ ಇಲ್ಲಿನ ಭೂಮಿಯ ಋಣತೀರಿಸಲು ಬಳಸಬೇಕು. ಆಗ ಮಾತ್ರ ಅವರು ನಮ್ಮವರು ಎಂಬ ಭಾವನೆ ಬೆಳೆಯಬಹುದು. ಅದಿಲ್ಲವಾದರೆ ಅವರು ತೋರುವ ದೇಶಾಭಿಮಾನವೂ ಆಷಾಢಭೂತಿತನವಾಗುವ ಅಪಾಯವಿದೆ. ಹೀಗೆ ಮನಮಾಡಿದವರಿಗೆ ಸ್ವದೇಶ ಎಷ್ಟು ಪ್ರೋತ್ಸಾಹ ನೆರವು ನೀಡುತ್ತದೆಂಬುದೂ ಮುಖ್ಯವಾಗುತ್ತದೆ. ದೇಶಭಕ್ತಿಗೆ ನೆರವೇಕೆ ಎಂದು ಪ್ರಶ್ನಿಸಬಹುದು. ಬಹುಕಾಲ ದೂರವಿದ್ದಾಗ ಮತ್ತು ಭಿನ್ನ ಪರಿಸರಕ್ಕೆ ಹೊಂದಿಕೊಂಡಾಗ ಇಲ್ಲಿನ ಅನುಭವಕ್ಕೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗಬಹುದು. ಉದಾಹರಣೆಗೆ ಮುಂದುವರಿದ ದೇಶಗಳಲ್ಲಿ ಉದ್ಯೋಗ, ವೃತ್ತಿ ನಡೆಸಿದ ಭಾರತೀಯನೊಬ್ಬನಿಗೆ ಮತ್ತೆ ಮರಳಿ ಮಣ್ಣಿಗೆ ಬಂದಾಗ ಇಲ್ಲಿನ ಭ್ರಷ್ಟ ವ್ಯವಸ್ಥೆಯನ್ನು ಸಹಿಸುವುದು ಕಷ್ಟವಾಗಬಹುದು. ವಿದೇಶದಲ್ಲಿದ್ದ ವೈದ್ಯ ದಂಪತಿಗಳು ತಮ್ಮ ಮಕ್ಕಳನ್ನು ಭಾರತದಲ್ಲೇ ಓದಿಸಬೇಕೆಂಬ ಮಹದಾಶೆಯಿಂದ ಬಂದು ಇಲ್ಲಿನ ಸಂಸ್ಥೆಯೊಂದನ್ನು ಸೇರಿ ಮಕ್ಕಳನ್ನು ಇಲ್ಲೇ ಓದಿಸಲು ಆರಂಭಿಸಿದರಾದರೂ ಒಂದೆರಡು ವರ್ಷಗಳಲ್ಲಿ ಇಲ್ಲಿನ ಭ್ರಷ್ಟ ವ್ಯವಸ್ಥೆಯನ್ನು ಸಹಿಸಲಾಗದೆ ವಿದೇಶಕ್ಕೆ ಮರಳಿದ ಸಂಗತಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

 ಪ್ರತಿಭಾ ಪಲಾಯನವೆಂಬುದು ಇತರ ದೇಶಗಳಿಗಿಂತ ಭಾರತಕ್ಕೆ ಹೆಚ್ಚು ನಂಟಿರುವ ಮತ್ತು ಕಿತ್ತುಹಾಕಲಾಗದಂತೆ ಅಂಟಿರುವ ಶಾಪ. ಈ ಸ್ಥಿತಿಗೆ ಇತರರನ್ನು ದೂಷಿಸಿ ಫಲವಿಲ್ಲ. ನಾವು ಅಂದರೆ ಈ ದೇಶದ ಪ್ರಜೆಗಳು ಮತ್ತು ನಮ್ಮ ಪ್ರಜಾಪ್ರಭುಗಳು ನಡೆಸಿಕೊಂಡು ಬಂದ ಅವಕಾಶವಾದಿ ಧೋರಣೆ ಮತ್ತು ನಡವಳಿಕೆ ಈ ದುರಂತದ ಪೋಷಕ-ಪಾಲಕರು. ಒಂದು ಉದಾಹರಣೆಯೊಂದಿಗೆ ಇದನ್ನು ವಿವರಿಸಬಹುದು: ಅಮೆರಿಕದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿ ಭಾರತಕ್ಕೆ ಬಂದ ರಘುರಾಮ ರಾಜನ್ ಅವರ ಅಧಿಕಾರಾವಧಿಯನ್ನು ಸರಕಾರವು ಸಹಜವಾಗಿಯೇ ವಿಸ್ತರಿಬಹುದಿತ್ತಾದರೂ ಅವರ ದೇಶಾಭಿಮಾನವನ್ನು ಶಂಕೆಗೊಳಪಡಿಸುವ ಅವಕಾಶ ಕಲ್ಪಿಸಿ, ಅದನ್ನು ಗಾಳಿಗೊಡ್ಡಿದ ದೀಪದಂತೆ, ಮಾಡಿ (ಮಾಡಿಸಿ?) ಅದೊಂದು ಸಾಮಾನ್ಯ ಹುದ್ದೆ ಮತ್ತು ಯಾರು ಬೇಕಾದರೂ ಅದನ್ನು ಅಲಂಕರಿಸಬಹುದೆಂಬಂತೆ ಪರಿಸ್ಥಿತಿಯನ್ನು ನಿರ್ಮಿಸಿತು. ಪರಿಣಾಮವಾಗಿ ರಾಜನ್ ತಾವಾಗಿಯೇ ವಿದೇಶಕ್ಕೆ ಮರಳುವಂತೆ ಮಾಡಲಾಯಿತು.

ಮಂತ್ರಿಗಿರಿಯನ್ನು ಯಾರು ಬೇಕಾದರೂ ನಿರ್ವಹಿಸಬಹುದೆಂಬಂತೆ ಈಗಿನ ರಾಜಕಾರಣವಿದೆ. ಸದ್ಯ ರಾಜನ್ ಸ್ಥಾನಕ್ಕೆ (ಆರ್ಥಿಕ ತಜ್ಞರಲ್ಲದ, ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾದ, ಸದ್ಯ ಭಾರತೀಯ ಸ್ಟೇಟ್ ಬ್ಯಾಂಕ್ ಅಧ್ಯಕ್ಷರಾಗಿರುವ, ಅರುಂಧತಿ ಭಟ್ಟಾಚಾರ್ಯರ ಹೆಸರು ಚಲಾವಣೆಯಲ್ಲಿದೆಯಾದರೂ) ರಾಜಕಾರಣದಿಂದಾಗಿ ಯಾರು ಬೇಕಾದರೂ ಆಯ್ಕೆಯಾಗಬಹುದು! ರಾಜಕಾರಣಿಗಳ ಬಗ್ಗೆ, ಅವರಿಂದ ಅವಕಾಶ ಪಡೆದ ಅನರ್ಹರ ಬಗ್ಗೆ ಜನತೆಗೆ ಸಹಜವಾಗಿಯೇ ವಿಶೇಷ ಗೌರವವಿಲ್ಲ. ಆದರೆ ಈ ದುರವಕಾಶವನ್ನು ತಾಂತ್ರಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಿಗೆ ಅಳವಡಿಸಿದಾಗ ಹೆತ್ತ ತಾಯಿಯ ಅನಾದರಕ್ಕೆ ಗುರಿಯಾದ ಶಿಶುಗಳಂತೆ ನಮ್ಮ ಅಸಾಮಾನ್ಯ ಪ್ರತಿಭೆಗಳು ಸಾಕುತಾಯಿಯನ್ನೇ ಹೆಚ್ಚು ಪ್ರೀತಿಸುವ ಅವಕಾಶ ಸೃಷ್ಟಿಯಾಗುತ್ತದೆ.

ಯಾವುದೇ ದೇಶ ತನ್ನ ಮಕ್ಕಳನ್ನು ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿಬೇಕು. ಅದು ಹೆತ್ತ ಸಾರ್ಥಕತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News