ಎವರೆಸ್ಟ್ ಏರಿದ್ದೇವೆಂದು ಎಲ್ಲರ ಕಿವಿಗೆ ಹೂವಿಟ್ಟರು ಪುಣೆಯ ಪೊಲೀಸ್ ದಂಪತಿ

Update: 2016-06-30 06:25 GMT

ಪುಣೆ, ಜೂ.30: ನಗರದ ಪೊಲೀಸ್ ಅಧಿಕಾರಿಗಳಾದ ದಿನೇಶ್ ಹಾಗೂ ತಾರಕೇಶ್ವರಿ ರಾಥೋಡ್ ಈ ತಿಂಗಳ ಆರಂಭದಲ್ಲಿ, ವಿಶ್ವದ ಅತಿ ಎತ್ತರದ ಪರ್ವತವಾದ ವೌಂಟ್ ಎವರೆಸ್ಟ್ ಏರಿದ್ದಾಗಿ ವರದಿಗಾರರಲ್ಲಿ ಹೇಳಿಕೊಂಡಿದ್ದರು. 30ರ ಆಸುಪಾಸಿನ ಈ ಪೊಲೀಸ್ ದಂಪತಿ, 29,035 ಅಡಿ ಎತ್ತರದ ಈ ಅತ್ಯುನ್ನತ ಪರ್ವತವನ್ನು ಏರಿದ ಮೊಟ್ಟಮೊದಲ ಭಾರತೀಯ ದಂಪತಿ ಎಂದು ಬೆನ್ನುತಟ್ಟಿಕೊಂಡಿದ್ದರು. ಈ ಮಹದುದ್ದೇಶ ಸಾಧಿಸುವ ಸಲುವಾಗಿ ಇದುವರೆಗೂ ಮಕ್ಕಳನ್ನು ಪಡೆದಿರಲಿಲ್ಲ ಎಂದು ಜೂನ್ 5ರಂದು ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈ ಹೆಮ್ಮೆಯೊಂದಿಗೆ ನಾವು ಮಗುವನ್ನು ಪಡೆಯಲು ಮುಂದಾಗಿದ್ದೇವೆ ಎಂದು ಪ್ರಕಟಿಸಿದರು.

ಇದು ಸಹಜವಾಗಿಯೇ ಎಲ್ಲರಿಗೂ ಹೆಮ್ಮೆಯ ವಿಷಯವಾಗಿತ್ತು. ಕಳೆದ ಋತುವಿನಲ್ಲಿ 70 ಮಂದಿ ಭಾರತೀಯರು ಮೌಂಟ್ ಎವರೆಸ್ಟ್ ಏರಿದ್ದರು. ಈ ವೇಳೆ ಪಶ್ಚಿಮ ಬಂಗಾಳದ ಮೂವರು ಮೃತಪಟ್ಟಿದ್ದರು. ಪುಣೆ ಪೊಲೀಸ್ ಪಡೆ ಹಾಗೂ ಮಹಾರಾಷ್ಟ್ರದ ರಾಜ್ಯ ಸಚಿವ ರಾಮ್ ಶಿಂಧೆ ಅವರು ಪೊಲೀಸ್ ದಂಪತಿಯ ಸಾಹಸವನ್ನು ಮೆಚ್ಚಿದ್ದರು.

ಆದರೆ ಇದೀಗ ಹಲವು ಮಾಧ್ಯಮಗಳು ಪೊಲೀಸ್ ದಂಪತಿ ಹೇಳಿಕೆ ನೈಜತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಡೀ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದು, ಈ ದಂಪತಿ ಎವರೆಸ್ಟ್ ಏರಿರುವುದು ನಿಜವೇ ಎಂದು ಖಚಿತಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಪರ್ವತಾರೋಹಿ ಸುರೇಂದ್ರ ಶೆಳ್ಕೆ ಪೊಲೀಸ್ ದಂಪತಿಯ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ದಿನೇಶ್ ಮೇ 23ರಂದು ಎವರೆಸ್ಟ್‌ನ ತುತ್ತತುದಿ ಏರಿದ್ದಾಗಿ ಜೂನ್ 5ರಂದು ಪತ್ರಿಕಗೋಷ್ಠಿ ನಡೆಸಿ ಪ್ರಕಟಿಸಿದ್ದರು. ಈ ದಂಪತಿ ಪರ್ವತಾರೋಹಣದ ಬೇಸ್ ಕ್ಯಾಂಪ್‌ನಲ್ಲಿದ್ದರೂ, ಯಾರೂ ಪರ್ವತದ ಮೇಲೆ ಅವರನ್ನು ನೋಡಿಲ್ಲ. ಇವರಿದ್ದ ತಂಡದ ಸದಸ್ಯರೇ ಹೇಳುವಂತೆ 17,999 ಅಡಿ ಎತ್ತರದಲ್ಲಿ ಮೇ 10ರಂದು ಹಿಮಪಾತವಾದ ಜಾಗಕ್ಕೂ ಈ ದಂಪತಿ ತಲುಪಿಲ್ಲ ಎಂದು ಹೇಳಿದರು. ಆದ್ದರಿಂದ ಮೇ 23ರಂದು ಅವರು ತುತ್ತತುದಿ ತಲುಪುವುದು ಸಾಧ್ಯವೇ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ರಾಥೋಡ್ ಹಾಕಿರುವ ಪರ್ವತಾರೋಹಣ ಚಿತ್ರಗಳ ನೈಜತೆ ಬಗ್ಗೆಯೂ ಸಂಶಯ ಮೂಡಿದೆ. ಬಝ್‌ಫೀಡ್ ಇಂಡಿಯಾ ಕೂಡಾ ದಿನೇಶ್ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿರುವ ಚಿತ್ರದ ನೈಜತೆಯನ್ನು ಪ್ರಶ್ನಿಸಿದೆ. ಅವರು ಶೇರ್ ಮಾಡಿದ ಚಿತ್ರದಲ್ಲಿ ಈ ದಂಪತಿ ಬೇರೆ ಬಗೆಯ ಕಿಟ್, ಬೂಟು ಹೊಂದಿದ್ದರು. ಅವುಗಳೊಂದಿಗೆ ಎವರೆಸ್ಟ್ ಏರುವುದು ಸಾಧ್ಯವಿಲ್ಲ. ಶೆಳ್ಕೆ ವಾದ ಸರಿ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News