ಆರ್‌ಬಿಐ ಗವರ್ನರ್‌ಗೆ 3 ವರ್ಷಗಳ ಅವಧಿ ತೀರಾ ಕಡಿಮೆ: ರಾಜನ್

Update: 2016-06-30 15:45 GMT

ಹೊಸದಿಲ್ಲಿ, ಜೂ.30: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯ ಅಧಿಕಾರಾವಧಿಯನ್ನು ವಿಸ್ತರಿಸಬೇಕೇಂದು ಗುರುವಾರ ಆರ್‌ಬಿಐ ಅಧ್ಯಕ್ಷ ರಘುರಾಮ್ ರಾಜನ್ ಅಭಿಪ್ರಾಯಿಸಿದ್ದಾರೆ. ಕೇಂದ್ರೀಯ ಬ್ಯಾಂಕ್‌ಗಳ ಅಧ್ಯಕ್ಷರ ಅಧಿಕಾರಾವಧಿಗೆ ಸಂಬಂಧಿಸಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತಿರುವ ಪದ್ಧತಿಯನ್ನು ಭಾರತದಲ್ಲಿಯೂ ಅನುಸರಿಸಬೇಕೆಂದು ಅವರು ಪ್ರತಿಪಾದಿಸಿದ್ದಾರೆ. ಆರ್‌ಬಿಐ ಅಧ್ಯಕ್ಷರಾಗಿ ರಘುರಾಮ್ ರಾಜನ್ ಅವರ ಮೂರು ವರ್ಷಗಳ ಅಧಿಕಾರಾವಧಿಯು ಮುಂದಿನ 9 ವಾರಗಳಲ್ಲಿ ಕೊನೆಗೊಳ್ಳಲಿದೆ.

 ಅರ್ಥಿಕತೆಯ ವಿವಿಧ ಅಂಶಗಳು ಹಾಗೂ ಬ್ಯಾಂಕ್‌ಗಳ ಅನುತ್ಪಾದಕ ಅಸ್ತಿಗಳ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಗೆ ವಿವರಣೆ ನೀಡಿದ ರಾಜನ್ ಅವರನ್ನು, ಸದಸ್ಯರು ಆರ್‌ಬಿಐ ಗವರ್ನರ್ ಅವರ ಅಧಿಕಾರಾವಧಿ ಎಷ್ಟಿರಬೇಕೆಂದು ಪ್ರಶ್ನಿಸಿದ್ದರು. ಆಗ ಅವರು ಆರ್‌ಬಿಐ ಅಧ್ಯಕ್ಷರ ಮೂರು ವಷಗಳ ಅಧಿಕಾರಾವಧಿಯು ತೀರಾ ಕಡಿಮೆಯಾಯಿತೆಂದು ರಾಜನ್ ಈ ಸಂದರ್ಭದಲ್ಲಿ ಅಭಿಪ್ರಾಯಿಸಿದ್ದರು.ರಾಜನ್ ಅವರ ಮೂರು ವರ್ಷಗಳ ಅಧಿಕಾರಾವಧಿಯು ಸೆಪ್ಟೆಂಬರ್ 4ಕ್ಕೆ ಕೊನೆಗೊಳ್ಳಲಿದೆ. ಆದರೆ ತನಗೆ ಎರಡನೆ ಅವಧಿಗೆ ಮುಂದುವರಿಯು ಇಚ್ಛೆಯಿಲ್ಲವೆಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಕೇಂದ್ರಯ ಬ್ಯಾಂಕ್ ಆಗಿರುವ ಫೆಡರಲ್ ಬ್ಯಾಂಕ್‌ನ ಮಂಡಳಿ ಸದಸ್ಯರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ನಾಲ್ಕು ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ ಹಾಗೂ ಗವರ್ನರ್ ಆಗಿ ನೇಮಕಗೊಳ್ಳುವವರೆಗೆ ಅವರು ಮಂಡಳಿಗೆ ಮರುನೇಮಕಗೊಳ್ಳುತ್ತಲೇ ಇರುತ್ತಾರೆ.

ಇಂದು ಮೂರು ತಾಸುಗಳ ಕಾಲ ನಡೆದ ಸಭೆಯಲ್ಲಿ ರಾಜನ್ ಅವರು ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಗೆ, ದೇಶದ ಆರ್ಥಿಕ ಸ್ಥಿತಿಗತಿ, ಸುಧಾರಣೆಗಳು ಹಾಗೂ ಆರ್‌ಬಿಐನ ಪುನಾರಚನೆ,ಬ್ಯಾಂಕಿಂಗ್ ವಲಯ ಎದುರಿಸುತ್ತಿರುವ ಸವಾಲುಗಳು ಹಾಗೂ ಅದು ಭವಿಷ್ಯದಲ್ಲಿ ನಡೆಯಬೇಕಾದ ಹಾದಿ ಮತ್ತಿತರ ವಿಷಯಗಳ ಬಗ್ಗೆ ವಿವರಣೆ ನೀಡಿದರು. ಮರುಪಾವತಿಯಾಗದ ಸಾಲದ ಸಮಸ್ಯೆಯನ್ನು ನಿಭಾಯಿಸಲು ರಾಜನ್ ಕೈಗೊಂಡ ವಿವಿಧ ಕ್ರಮಗಳನ್ನು ಸಮಿತಿಯು ಪ್ರಶಂಸಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News