ಹೆರಿಗೆ ರಜೆ ಹೆಚ್ಚಳ ಕಾರ್ಮಿಕ ಸಚಿವಾಲಯದಿಂದ ಕಾಯ್ದೆ ತಿದ್ದುಪಡಿ ನಿರೀಕ್ಷೆ

Update: 2016-06-30 18:33 GMT

 ಹೊಸದಿಲ್ಲಿ, ಜೂ.30: ಹಾಲಿ 12 ವಾರಗಳಿರುವ ಹೆರಿಗೆ ರಜೆಯನ್ನು 26 ವಾರಗಳಿಗೆ ಹೆಚ್ಚಿಸಲು ಹೆರಿಗೆ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ತರಲು ತನ್ನ ಸಚಿವಾಲಯ ಸಿದ್ಧವಿದೆಯೆಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿರುವರೆಂದು ವರದಿಯಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಈ ವಿಷಯದ ಕುರಿತು ಬಂಡಾರುರೊಂದಿಗೆ ಚರ್ಚಿಸಿದ ವೇಳೆ, ಅವರು ತನ್ನ ಇಚ್ಛೆಯನ್ನು ಪ್ರಕಟಿಸಿದ್ದಾರೆಂದು ತಿಳಿದುಬಂದಿದೆ.
ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿ ಸುವಂತೆ ಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕಳೆದ ವರ್ಷದ ಸೆಪ್ಟಂಬರ್‌ನಲ್ಲಿಯೇ ಪ್ರಸ್ತಾವವೊಂದನ್ನು ಮುಂದಿರಿಸಿತ್ತು. ಅದು ಜಾರಿಯಾದಲ್ಲಿ ಖಾಸಗಿ ವಲಯ ಸೇರಿದಂತೆ ದುಡಿಯುವ ಮಹಿಳೆಯರಿಗೆ ಲಾಭವಾಗಲಿದೆ. ಆದರೆ, ಸಂಪುಟವು ಅದನ್ನು ಹೆಚ್ಚಿನ ಸಮಾಲೋಚನೆಗಾಗಿ ಕಳುಹಿಸಿದ ಬಳಿಕ, ಅದೀಗ ಸಚಿವ ಸಮಿತಿಯ ಬಳಿಯಿದೆ.
ವಿಶ್ವಬ್ಯಾಂಕ್‌ನೊಂದಿಗೆ ವಿವಿಧ ಸಚಿವಾಲಯಗಳ ಸಭೆ ಯೊಂದರ ನೇಪಥ್ಯದಲ್ಲಿ ಇಬ್ಬರೂ ಸಚಿವರು ಭೇಟಿಯಾಗಿದ್ದಾಗ, ಮೇನಕಾ, ಹೆರಿಗೆ ರಜೆಯ ಪರಿಷ್ಕರಣೆಗಾಗಿ ಬಲವಾದ ಆಗ್ರಹ ಮಾಡಿದ್ದರೆನ್ನಲಾಗಿದೆ. ಇದನ್ನು ತಾನು ತಿದ್ದುಪಡಿಯೊಂದರ ರೀತಿಯಲ್ಲಿ ಸಂಸತ್ತಿನಲ್ಲಿ ಮಂಡಿಸುವೆನೆಂದು ಕಾರ್ಮಿಕ ಸಚಿವ ಭರವಸೆ ನೀಡಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News