ಜೈಲಲ್ಲಿ ಕೊಳೆಯುತ್ತಿರುವ ಅಪ್ರಾಪ್ತೆ ಬಿಹಾರದ 'ಟಾಪರ್'

Update: 2016-07-01 04:05 GMT

ಹಸಿ ಮಲಾಹಿ (ವೈಶಾಲಿ), ಜು.1: ಬಿಹಾರ ರಾಜ್ಯದ ಇಂಟರ್ಮೀಡಿಯೇಟ್ ಪರೀಕ್ಷೆಯ ಕಲಾವಿಭಾಗದಲ್ಲಿ ರಾಜ್ಯದ ಟಾಪರ್ ಆಗಿದ್ದ ರೂಬಿ ರಾಯ್ ಕಳೆದ ನಾಲ್ಕು ದಿನಗಳಿಂದ ಬಿಹಾರದ ಬೆವೂರು ಸೆಂಟ್ರಲ್ ಜೈಲಿನಲ್ಲಿ ಕೊಳೆಯುತ್ತಿದ್ದಾಳೆ. ಆಕೆ ಬಾಲಾಪರಾಧಿ ಎನ್ನುವುದನ್ನು ಪಾಟ್ ನ ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಇದುವರೆಗೆ ಕುಟುಂಬದ ಯಾರೂ ತಲೆಹಾಕಿಲ್ಲ. ರಾಜ್ಯ ಶಿಕ್ಷಣ ಮಂಡಳಿ ನಡೆಸಿದ ಮರು ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಬಳಿಕ ಆಕೆಯನ್ನು ಕಳೆದ ಶನಿವಾರ ಬಂಧಿಸಿ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿತ್ತು.

ಭಾನುವಾರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆದರೆ ಆಕೆ ಇನ್ನೂ ಅಪ್ರಾಪ್ತ ವಯಸ್ಸಿನವಳು ಎಂದು ಸಾಬೀತುಪಡಿಸುವವರೆಗೂ ನ್ಯಾಯಾಂಗ ಬಂಧನ ವಿಧಿಸಿ ಕೇಂದ್ರೀಯ ಕಾರಾಗೃಹಕ್ಕೆ ಕಳುಹಿಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಗುರುವಾರ ಆಕೆಯ ವಿರುದ್ಧದ ಪ್ರಕರಣ ವಿಚಾರಣೆ ವೇಳೆ, ನ್ಯಾಯಾಲಯ ಆಕೆಯ ಹತ್ತನೇ ತರಗತಿ ಪರೀಕ್ಷೆಯ ಪ್ರಮಾಣಪತ್ರವನ್ನು ದೃಢೀಕರಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಇದರ ಪ್ರಕಾರ ಆಕೆಯ ಜನ್ಮದಿನಾಂಕ 1998ರ ನವೆಂಬರ್ 15 ಎಂದಿದೆ. ಅದು ನಿಜವಾಗಿದ್ದಲ್ಲಿ, ಆಕೆಯ ವಯಸ್ಸು 18 ವರ್ಷ ತುಂಬಲು ಇನ್ನೂ ಐದು ತಿಂಗಳು ಬೇಕು.

ಪಟ್ನಾ ದಿಂದ ಸುಮಾರು 60 ಕಿಲೋಮೀಟರ್ ದೂರದ ಆಕೆಯ ಹುಟ್ಟೂರು ಹಸಿ ಮಲಾಹಿಯಲ್ಲಿ ಆಕೆಯ ಮನೆ ಹುಡುಕುವುದು ಕಷ್ಟವೇನಲ್ಲ. ಚಹಾ ಅಂಗಡಿಯವರು, ಮಕ್ಕಳು ಹಾಗೂ ಇತರ ಜನ ಆಕೆಯ ಮನೆಗೆ ಸುಲಭವಾಗಿ ದಾರಿ ತೋರಿಸುತ್ತಾರೆ. ಆದರೆ ರೂಬಿ ಮನೆಗೆ ಬೀಗ ಜಡಿಯಲಾಗಿದೆ. ಪೋಷಕರು ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ.

ರೂಬಿ ಪ್ರಕರಣ ಈ ಗ್ರಾಮಸ್ಥರಲ್ಲಿ ಮಾತ್ರ ಆಕ್ರೋಶ ಹುಟ್ಟಿಸಿದೆ. ರೂಬಿ ಮನೆಯ ಮೂರು ಮನೆಯಾಚೆ ವಾಸಿಸುತ್ತಿರುವ ಪ್ರಯಾಸ್ ರಾಯ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, "ಈ ಹಗರಣ ಹೇಗೆ ನಡೆಯಿತು ಎಂದು ಸಂಬಂಧಪಟ್ಟ ಸಚಿವರನ್ನೇ ಕೇಳಿ" ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಪೊಲೀಸರಿಗೆ ಮಗುವನ್ನು ಬಂಧಿಸುವುದು ಸುಲಭ ಎಂದು ಅವರು ವ್ಯಂಗ್ಯವಾಡಿದರು.

ಆಕೆ ಒಳ್ಳೆಯ ಹುಡುಗಿ. ಆಕೆಗೆ ಹಣ ಕೊಟ್ಟವರು ಯಾರು? ಆಕೆಯ ತಂದೆ ತಾಯಿಯನ್ನು ಬಂಧಿಸುವ ಬದಲು, ಹುಡುಗಿಯನ್ನು ಜೈಲಿಗೆ ಕಳುಹಿಸಲಾಗಿದೆ. ಆಕೆಯ ಪರ ನ್ಯಾಯಾಲಯದಲ್ಲಿ ಹೋರಾಡುವವರು ಯಾರು ಎಂದು ನೆರೆಮನೆಯ ಗೋಕುಲ್ ರಾಯ್ ಪ್ರಶ್ನಿಸುತ್ತಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News