ಮೋದಿ ನೇತೃತ್ವದಲ್ಲಿ ಭಾರತದ ಅಭಿವೃದ್ಧಿಗೆ ವಿಶ್ವಬ್ಯಾಂಕ್ ಮೆಚ್ಚುಗೆ

Update: 2016-07-01 03:47 GMT

ಹೊಸದಿಲ್ಲಿ, ಜು.1: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಂಗ್ ಕಿಮ್ ಮೆಚ್ಚುಗೆ ಸೂಚಿಸಿದ್ದಾರೆ.
ಈ ಅಭಿವೃದ್ಧಿ ಯೋಜನೆಗಳ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ವ್ಯವಹಾರ ನಡೆಸಲು ಅನುಕೂಲಕರ ವಾತಾವರಣ ಇರುವ ದೇಶಗಳ ಪಟ್ಟಿಯಲ್ಲಿ ಭಾರತದ ರೇಕಿಂಗ್ ಮೇಲೇರಿದೆ ಎಂದು ಅವರು ಹೇಳಿದ್ದಾರೆ.

ವಿಶ್ವಬ್ಯಾಂಕ್ ಅಧ್ಯಕ್ಷರು ಹಣಕಾಸು ಸಚಿವ ಅರುಣ್ ಜೇಟ್ಲಿ, ಇಂಧನ ಖಾತೆ ಸಚಿವ ಪಿಯೂಶ್ ಗೋಯಲ್, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಗುರುವಾರ ಭೇಟಿ ಮಾಡಿ ಭಾರತದ ಸೌರಶಕ್ತಿ ಯೋಜನೆಗಳೂ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ವಿಶ್ವಬ್ಯಾಂಕ್ ನೆರವು ನೀಡುವ ಭರವಸೆಯನ್ನು ನೀಡಿದರು.

ಆರು ಪ್ರಮುಖ ಕ್ಷೇತ್ರಗಳಲ್ಲಿ ಭಾರತದ ಪ್ರಗತಿ ಬಗ್ಗೆ ವಿಶ್ವಬ್ಯಾಂಕ್ ಮೆಚ್ಚುಗೆ ಸೂಚಿಸುತ್ತದೆ. ಮೋದಿ ಸಂಪುಟ ತೀರಾ ಕಷ್ಟಕರ ಹಾಗೂ ಪ್ರಮುಖ ಗುರಿಗಳನ್ನು ತಲುಪಿದೆ. ಎಷ್ಟೊಂದು ಅಭಿವೃದ್ಧಿ ಸಾಧಿಸಿದೆ ಎನ್ನುವುದು ನಿಜಕ್ಕೂ ಅಚ್ಚರಿ ತಂದಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ಭಾರತಕ್ಕೆ ನೀಡಿದ ವಿಶ್ವಬ್ಯಾಂಕ್ ಸಾಲದ ಪ್ರಮಾಣ 5 ಶತಕೋಟಿ ಡಾಲರ್ ನಷ್ಟು ಹೆಚ್ಚಿದೆ. ಮುಂದಿನ ಕೆಲ ವರ್ಷಗಳಲ್ಲಿ ಇದೇ ಪ್ರವೃತ್ತಿ ಮುಂದುವರಿಯಲಿದೆ. ಭಾರತದ ಪ್ರಗತಿದರ ಈಗ ಶೇಕಡ 7.6ರಷ್ಟಿದೆ. ಇದು ಜಾಗತಿಕ ಮಟ್ಟದಲ್ಲೇ ಹೊಳೆಯುವಂಥ ಸಾಧನೆ ಎಂದು ಕಿಮ್ ಗುಣಗಾನ ಮಾಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News