ಭಯೋತ್ಪಾದನೆ ಆರೋಪ : ‘‘ಹೈದರಾಬಾದ್ ಮುಸ್ಲಿಮ್ ಯುವಕರು ಸುಲಭ ಟಾರ್ಗೆಟ್’’

Update: 2016-07-01 08:51 GMT

ಹೈದರಾಬಾದ್,ಜು.1 : ಬುಧವಾರ ಹಳೆ ಹೈದರಾಬಾದ್ ಪ್ರದೇಶದ ಐದು ಯುವಕರನ್ನು ಇಸ್ಲಾಮಿಕ್ ಸ್ಟೇಟ್ ಬೆಂಬಲಿಗರೆಂಬ ಆರೋಪದ ಮೇಲೆಬಂಧಿಸಿರುವ ಘಟನೆಯಿಂದ ಉಗ್ರವಾದಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೈದರಾಬಾದ್ ಮುಸ್ಲಿಮ್ ಯುವಕರು ಸುಲಭ ಟಾರ್ಗೆಟ್ ಆಗುತ್ತಾರೆಂದು, ಆಯುಬ್ ಅಲಿ ಖಾನ್ ಎಂಬ ಅಂಕಣಕಾರ ಹೇಳುತ್ತಾರೆಂದು ಹಿಂದುಸ್ಥಾನ್ ಟೈಮ್ಸ್ ವರದಿತಿಳಿಸಿದೆ.

ಬುಧವಾರ ಅಪರಾಹ್ನ ಇಲ್ಲಿನ ಮುಸ್ಲಿಮ್ ಸಮುದಾಯ ರಮಝಾನ್ ಪ್ರಾರ್ಥನೆಗೆ ತಯಾರಾಗುತ್ತಿದ್ದಂತೆಯೇ ಐದು ಮಂದಿ ಯುವಕರ ಬಂಧನದ ಸುದ್ದಿ ಬರಸಿಡಿಲಿನಂತೆ ಎರಗಿತ್ತು.

ಪೊಲೀಸರು ಮುಸ್ಲಿಮ್ ಯುವಕರನ್ನು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಿ ಅವರನ್ನು ಜೈಲಿಗಟ್ಟುತ್ತಿದ್ದಾರೆಂಬುದು ಹಲವುಸ್ಥಳೀಯ ನಿವಾಸಿಗಳ ಅಭಿಪ್ರಾಯವಾಗಿದೆ.

ಬುಧವಾರ ಬಂಧಿತರಾದವರಲ್ಲಿ ಯಾರೂ ಯಾವುದೇ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲವೆಂಬುದು ಸ್ಥಳೀಯ ಜನರ ವಾದವಾಗಿದೆ. ಇದು ಮುಸ್ಲಿಮ್ ಸಮುದಾಯದಲ್ಲಿ ಅಸುರಕ್ಷತೆಯ ಭಾವನೆ ಮೂಡಿಸಿದೆಯೆಂದೂ ಅವರು ಹೇಳುತ್ತಾರೆ. ಬಂಧಿತರಲ್ಲಿ ಒಬ್ಬನಾದ ಮೊಹಮ್ಮದ್ ಇಬ್ರಾಹಿಂ ಯಾಜ್ದಾನಿ (30) ಇಂಜಿನಿಯರಿಂಗ್ ಪದವೀಧರನಾಗಿದ್ದು ಇ-ಕಾಮರ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ಆತನ ಸಹೋದರ ಇಲ್ಯಾಸ್ (20) ಇತ್ತೀಚೆಗಷ್ಟೇ ಪದವಿ ಮುಗಿಸಿದ್ದಾನೆ.

ಅಂಕಣಕಾರ ಆಯೂಬ್ ಆಲಿ ಖಾನ್ ಹೇಳುವಂತೆ ಕೆಲವೇ ಕೆಲವು ಪ್ರಕರಣಗಳ ಹೊರತಾಗಿ ಹೆಚ್ಚಿನ ಪ್ರಕರಣಗಳಲ್ಲಿ ಹೀಗೆ ಬಂಧಿತರಾದ ಮುಸ್ಲಿಮ್ ಯುವಕರ ವಿರುದ್ಧದ ಆರೋಪಗಳನ್ನು ಪೊಲೀಸರಿಗೆ ಸಾಬೀತು ಪಡಿಸಲಾಗಿಲ್ಲ.2007 ರ ಮಕ್ಕಾ ಮಸೀದಿ ಸ್ಪೋಟದ ಬಳಿಕ ಪೊಲೀಸರು ನೂರಾರು ಮುಸ್ಲಿಮ್ ಯುವಕರನ್ನು ವಶಪಡಿಸಿಕೊಂಡು21 ಮಂದಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರಲ್ಲದೆ ಅವರನ್ನು 18 ತಿಂಗಳುಗಳ ಕಾಲ ಜೈಲಿನಲ್ಲಿರಿಸಿದ್ದರು. ಎಲ್ಲರನ್ನೂ 2009 ರಲ್ಲಿ ಖುಲಾಸೆಗೊಳಿಸಲಾಗಿತ್ತಲ್ಲದೆ ಬಂಧಿತರನ್ನು ಬಿಡುಗಡೆಗೊಳಿಸುವಾಗ ಒಂದು ಲಕ್ಷ ರೂಪಾಯಿ ಪರಿಹಾರ ಕೂಡ ನೀಡಲಾಗಿತ್ತು. ಅದೇ ವರ್ಷ ಲುಂಬಿನಿ ಪಾರ್ಕ್ ಮತ್ತು ಗೋಕುಲ್ ಚಾಟ್ ಪ್ರದೇಶದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ 50 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದ್ದರೂ ಯಾರೊಬ್ಬರ ವಿರುದ್ಧದ ಆರೋಪವನ್ನೂ ಸಾಬೀತು ಪಡಿಸಲು ಸಾಧ್ಯವಾಗಿಲ್ಲ.

ಫೆಬ್ರವರಿ 2013 ರಲ್ಲಿ ದಿಲ್ ಸುಖ್ ನಗರದಲ್ಲಿ ನಡೆದಸ್ಫೋಟಕ್ಕೆ ಸಂಬಂಧಿಸಿದಂತೆಹಲವು ಮುಸ್ಲಿಮ್ ಯುವಕರನ್ನು ಬಂಧಿಸಲಾಗಿತ್ತಾದರೂ ಸಾಕ್ಷ್ಯಗಳ ಕೊರತೆಯಿಂದಾಗಿ ಅವರನ್ನು ಬಿಡುಗಡೆಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News