ರಮಝಾನ್-ಬಲಿದಾನಗಳ ಕುರಿತು ಇರ್ಫಾನ್ ಖಾನ್‌ರ ಟೀಕೆಯಿಂದ ವಿವಾದ

Update: 2016-07-01 18:21 GMT

ಹೊಸದಿಲ್ಲಿ, ಜು.1: ರಮಝಾನ್ ಹಾಗೂ ಮುಹರ್ರಮ್ ಕುರಿತು ನೀಡಿದ ಹೇಳಿಕೆಯೊಂದರಿಂದ ನಟ ಇರ್ಫಾನ್ ಖಾನ್ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಅವರ ಹೊಸ ಚಿತ್ರ ‘ಮದಾರಿ’ಯ ಪ್ರಚಾರಾರ್ಥ ಗುರು ವಾರ ನಡೆಸಿದ್ದ ಸಮಾರಂಭವೊಂದರಲ್ಲಿ, ರಮಝಾನ್ ಸಮಯದ ಉಪವಾಸ ಹಾಗೂ ಬಲಿದಾನಗಳ ಸತ್ತ್ವ ಕಳೆದು ಹೋಗಿದೆಯೇ? ಎಂದು ಖಾನ್ ಪ್ರಶ್ನಿಸಿದರು.
‘‘ನಾವು ಆಚರಣೆಗಳ ನಿಜವಾದ ಅರ್ಥವನ್ನು ಮರೆತಿದ್ದೇವೆ. ನಾವದನ್ನು ‘ತಮಾಷೆಯನ್ನಾಗಿ’ ಮಾಡಿದ್ದೇವೆ’’ ಎಂದು 49ರ ಹರೆಯದ ನಟ ಹೇಳಿದ್ದರು.
‘‘ಕುರ್ಬಾನಿಯೆಂದರೆ ನಿಮ್ಮ ಹೃದಯಕ್ಕೆ ಸಮೀಪವಿರುವ ಯಾವುದನ್ನಾದರೂ ತ್ಯಾಗ ಮಾಡುವುದು ಹಾಗೂ ಇತರರೊಂದಿಗೆ ಹಂಚಿಕೊಳ್ಳುವುದಾಗಿದೆ. ಇಂದು ಬಲಿದಾನಕ್ಕಾಗಿ ನೀವು ಮಾರುಕಟ್ಟೆಯಿಂದ ಆಡೊಂದನ್ನು ಖರೀದಿಸುತ್ತೀರಿ. ಇದು ಯೋಚಿಸಬೇಕಾದ ವಿಷಯ. ಇದು ಸಾಮಾನ್ಯ ಜ್ಞಾನದ ವಿಷಯ. ಇನ್ನೊಂದು ಜೀವವನ್ನು ಬಲಿಗೊಡುವುದರಿಂದ ನಾವೇನಾದರೂ ಒಳ್ಳೆಯದನ್ನು ಸಂಪಾದಿಸುತ್ತೇವೆಯೇ? ಎಂದು ಪ್ರತಿಯೊಬ್ಬನೂ ಪ್ರಶ್ನಿಸಿಕೊಳ್ಳಬೇಕು’’ ಎಂದು ಖಾನ್ ಹೇಳಿಕೆ ನೀಡಿದ್ದರು.
‘‘ಆಚರಣೆಗಳು ಹಾಗೂ ಹಬ್ಬಗಳ ಅರ್ಥವನ್ನು ತಿಳಿದುಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಅವು ದುರುಪಯೋಗವಾಗುತ್ತವೆ. ನಾವು ಮುಹರ್ರಮ್‌ನ ಪರಿಹಾಸ್ಯ ಮಾಡುತ್ತಿದ್ದೇವೆ. ಅದು ದುಃಖ ಸೂಚಿಸಲು ಇರುವಂತಹುದು. ಆದರೆ, ನಾವು ಮೆರವಣಿಗೆ ಮಾಡುತ್ತೇವೆ’’ ಎಂದಿರುವ ಅವರು, ಭಯೋತ್ಪಾದನೆಯ ಕುರಿತು ವೌನವಾಗಿರುವುದಕ್ಕಾಗಿ ಮುಸ್ಲಿಮ್ ನಾಯಕರನ್ನು ಟೀಕಿಸಿದ್ದಾರೆ.
ಹಲವು ಮುಸ್ಲಿಮ್ ನಾಯಕರು ಖಾನ್‌ರ ಈ ಟೀಕೆಗೆ ಸಿಟ್ಟಿನಿಂದ ಅಥವಾ ಅಸಮಾಧಾನದಿಂದ ಪ್ರತಿಕ್ರಿಯಿಸಿದ್ದಾರೆ. ಅವರು ಬಲಿದಾನದ ಮಹತ್ವ ತಿಳಿಯಬೇಕೆಂಬುದು ತನ್ನ ಭಾವನೆಯಾಗಿದೆ. ಈ ಹೇಳಿಕೆಗಳು ಖಂಡನೀಯವೆಂದು ಮುಸ್ಲಿಮ್ ವಿದ್ವಾಂಸ ಕಲಾಂ ರಝಾ ಸೂರಿ ಎಂಬವರು ಹೇಳಿದ್ದಾರೆ.
ಖಾನ್ ಒಬ್ಬ ಧಾರ್ಮಿಕ ನಾಯಕನಲ್ಲ. ಆತನ ಬೋಧನೆ ಅಗತ್ಯವಿಲ್ಲವೆಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಝಫರ್ಯಾಬ್ ಗೀಲಾನಿ ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News