2 ವರ್ಷಗಳಲ್ಲಿ ರೂ. 43 ಸಾವಿರ ಕೋಟಿ ಕಪ್ಪು ಹಣ ಪತ್ತೆ: ಕಂದಾಯ ಕಾರ್ಯದರ್ಶಿ

Update: 2016-07-02 15:20 GMT

ಹೊಸದಿಲ್ಲಿ, ಜು.2: ಕಳೆದೆರಡು ವಿತ್ತ ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆಯು ತನಿಖೆಗಳ ಮೂಲಕ ರೂ. 43 ಸಾವಿರ ಕೋಟಿಗಳಷ್ಟು ಅಘೋಷಿತ ಆದಾಯವನ್ನು ಬಯಲಿಗೆಳೆದಿದೆಯೆಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಇಂದು ತಿಳಿಸಿದ್ದಾರೆ.
ಇಲಾಖೆಯ ಶೋಧಗಳಿಂದ ರೂ. 21 ಸಾವಿರ ಕೋಟಿ ಪತ್ತೆಯಾಗಿದ್ದರೆ, ಉಳಿದ ರೂ. 22 ಸಾವಿರ ಕೋಟಿ ವಿವಿಧ ಸಮೀಕ್ಷೆಗಳಿಂದ ಬಹಿರಂಗವಾಗಿದೆಯೆಂದವರು ಪತ್ರಕರ್ತರೊಡನೆ ಹೇಳಿದರು.
ಆದರೆ, ಈ ಹಣ ವ್ಯಕ್ತಿಗಳಿಗೆ ಸೇರಿದುದೇ ಅಥವಾ ಕಂಪೆನಿಗಳದೇ ಎಂಬುದನ್ನು ಅಧಿಯಾ ವಿವರಿಸಿಲ್ಲ.
ಈ ಅಘೋಷಿತ ಮೊತ್ತಕ್ಕೆ ಎಷ್ಟು ತೆರಿಗೆ ಹೇರಬೇಕೆಂಬುದನ್ನು ಲೆಕ್ಕ ಹಾಕುವುದರಲ್ಲಿ ಇಲಾಖೆಯೀಗ ವ್ಯಸ್ತವಾಗಿದೆಯೆಂದು ಅವರು ತಿಳಿಸಿದರು.
ಇದುವರೆಗೆ, ಭಾರತೀಯರ ವಿದೇಶಿ ಖಾತೆಗಳಲ್ಲಿ ಪತ್ತೆಯಾಗಿರುವ ರೂ. 13 ಸಾವಿರ ಕೋಟಿ ಕಪ್ಪು ಹಣಕ್ಕೆ ವಿಧಿಸಬೇಕಾದ ತೆರಿಗೆಯ ಕುರಿತು ಮಾತನಾಡಿದ ಅಧಿಯಾ, ಆ ಹಣಕ್ಕೆ ಶೇ. 120ರಷ್ಟು ತೆರಿಗೆ ವಿಧಿಸಲಾಗುವುದು ಎಂದರು.
ಸುಮಾರು 5.4 ಕೋಟಿ ತೆರಿಗೆದಾರರಿದ್ದು, ಅವರಲ್ಲಿ 1.5 ಲಕ್ಷ ಮಂದಿ ರೂ. 50 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರಾಗಿದ್ದಾರೆ. ಸುಮಾರು 1.8 ಕೋಟಿ ಜನರು ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ತೆರಿಗೆದಾರರಾಗಿದ್ದಾರೆಂದು ಅವರು ತಿಳಿಸಿದರು.
1.3 ಕೋಟಿ ಹೊಸ ತೆರಿಗೆದಾರರನ್ನು ಪಡೆಯುವ ತಮ್ಮ ಗುರಿಯಲ್ಲಿ, 90 ಲಕ್ಷ ಮಂದಿ ಈಗಾಗಲೇ ತಮ್ಮ ತೆಕ್ಕೆಗೆ ಬಂದಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಅವರಿಂದ ರೂ. 10 ಸಾವಿರ ಕೋಟಿ ಹೆಚ್ಚುವರಿ ಆದಾಯವನ್ನು ತಾವು ಈಗಾಗಲೇ ಸಂಗ್ರಹಿಸಿದ್ದೇವೆಂದು ಅಧಿಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News